ಶಿವಮೊಗ್ಗ: ಹಳೇ ಶಿವಮೊಗ್ಗ ಭಾಗದಲ್ಲಿ ಬೆಳಗ್ಗೆಯಿಂದ ನಡೆದ ಅಹಿತಕರ ಘಟನೆ ಹಿನ್ನಲೆಯಲ್ಲಿ ಶಿವಮೊಗ್ಗದ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದೆ. ಇಂದು ಸಂಜೆ 6 ರಿಂದ ನಾಳೆ ಬೆಳಗ್ಗೆ 6 ಗಂಟೆ ತನಕ ಕರ್ಪ್ಯೂ ಜಾರಿಯಾಗಿದೆ.
ಶಿವಮೊಗ್ಗದ ದೊಡ್ಡಪೇಟೆ, ಕೋಟೆ ಹಾಗೂ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದೆ. ಇಂದು ಬೆಳಗ್ಗೆ ನಡೆದ ಅಹಿತಕರ ಘಟನೆಯಿಂದ ನಗರದ ಹೆಚ್.ಸಿದ್ದಯ್ಯ ರಸ್ತೆ, ಆಜಾದ್ ನಗರದ 3ನೇ ತಿರುವು ಸೇರಿದಂತೆ ಇನ್ನೂ ಅನೇಕ ಕಡೆ ಗಲಾಟೆ ನಡೆದಿದೆ. ಇದರಿಂದ ಡಿಸಿ ಹಾಗೂ ಎಸ್ಪಿಯವರ ನಿರ್ದೇಶನದ ಮೇರೆಗೆ ಇಂದು ಮಧ್ಯಾಹ್ನ 3 ಗಂಟೆಯಿಂದ ಶನಿವಾರ ಬೆಳಗ್ಗೆ 10 ಗಂಟೆಯ ತನಕ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಶಿವಮೊಗ್ಗ ನಗರದಲ್ಲಿ ನಡೆದ ಅಹಿತಕರ ಘಟನೆ ಹಿನ್ನಲೆಯಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದೆ ಎಂದು ಈ ಟಿವಿ ಭಾರತಕ್ಕೆ ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ. ನಾಲ್ಕು ಜನರಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ, ಅಲ್ಲದೆ ಸಭೆ ನಡೆಸುವಂತಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ
ನಗರಕ್ಕೆ ಐಜಿ ಭೇಟಿ, ಪರಿಶೀಲನೆ:
ಶಿವಮೊಗ್ಗ ನಗರದಲ್ಲಿ ವಿವಿಧೆಡೆಯಲ್ಲಿ ನಡೆದ ಅಹಿತಕರ ಗಲಾಟೆಯಿಂದ ಪೂರ್ವ ವಲಯದ ಐಜಿಪಿ ರವಿ. ಎಸ್ ರವರು ಶಿವಮೊಗ್ಗ ನಗರಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಇಂದು ಲಷ್ಕರ್ ಮೊಹಲ್ಲದಲ್ಲಿ ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರಿಂದ ಬೆಳಗ್ಗೆ ಗಾಂಧಿ ಬಜಾರ್ನಲ್ಲಿ ಕಾರ್ಯಕರ್ತರು ಜಮಾವಣೆಗೊಂಡು ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದರು.
ಎಸ್ಪಿ ಶಾಂತರಾಜುರವರ ಭರವಸೆಯ ಮೇರೆಗೆ ಅಲ್ಲಿಂದ ಬಜರಂಗ ದಳಕಾರ್ಯಕರ್ತರು ವಾಪಸ್ ಆಗಿದ್ದರು. ಈ ವೇಳೆ ಗಾಂಧಿ ಬಜಾರ್ ತಿರುಪಳ್ಳಯ್ಯನ ಕೇರಿ ಬಳಿ ಆಟೋವನ್ನು ಜಖಂಗೊಳಿಸಿದರು. ನಂತರ ಕಸ್ತೂರಬಾ ರಸ್ತೆಯಲ್ಲಿ ಕಾರಿನ ಗಾಜು ಒಡೆದು ಜಖಂ ಮಾಡಿದ್ದರು. ಇನ್ನು ರವಿವರ್ಮ ಬೀದಿಯಲ್ಲಿ ಕಿಡೀಗೇಡಿಗಳು ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರು ಹಾಗೂ ಆಟೋ ಜಖಂ ಮಾಡಲಾಗಿತ್ತು. ತಕ್ಷಣ ಪೊಲೀಸರ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶಿವಮೊಗ್ಗದಲ್ಲಿ ಬೆಳಗ್ಗೆಯಿಂದ ಸಂಜೆ ತನಕ 11 ಮಂದಿ ಗಾಯಾಳುಗಳಾಗಿದ್ದಾರೆ. ಪೊಲೀಸ್ ಇಲಾಖೆ ನಗರಾದ್ಯಂತ ಗಸ್ತು ಪಹರೆ ನಡೆಸುತ್ತಿದೆ. ಹೊರಗಡೆಯಿಂದ ಹೆಚ್ಚಿನ ತುಕಡಿಯನ್ನು ಕರೆಸಿಕೊಳ್ಳುತ್ತಿದ್ದಾರೆ.