ಶಿವಮೊಗ್ಗ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಲಕ್ಷಾಂತರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಆದರೆ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಪಕ್ಕದಲ್ಲಿರುವ ಬೈಪಾಸ್ ರಸ್ತೆಯ ಪಕ್ಕದಲ್ಲಿರುವ ಅಲೆಮಾರಿ ಕ್ಯಾಂಪ್ಗೆ ಮಾತ್ರ 2ನೇ ಅಲ್ಲೆಯಲ್ಲಿ ಕೊರೊನಾ ಕಾಲಿಟ್ಟಿಲ್ಲ.
ಈ ಅಲೆಮಾರಿ ಕ್ಯಾಂಪ್ನಲ್ಲಿ 40 ಕುಟುಂಬಗಳು ವಾಸಿಸುತ್ತಿದ್ದು, ಇವರು ಹುಟ್ಟಿನಿಂದಲೂ ವಿದ್ಯುತ್ ಕಂಡಿಲ್ಲ. 30 ವರ್ಷಗಳಿಂದಲೂ ಇಲ್ಲಿಯೇ ವಾಸಿಸುತ್ತಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕೊಳಚೆ ನೀರು, ಹಂದಿ, ನಾಯಿಗಳ ಹಾವಳಿ ಮಧ್ಯೆಯೇ ಬದುಕುತ್ತಿದ್ದಾರೆ. ಕುಡಿಯುವ ನೀರು, ವಿದ್ಯುತ್, ಬೀದಿ ದೀಪ, ವಿದ್ಯುತ್ ವ್ಯವಸ್ಥೆ ಇಲ್ಲದ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ದೇವರವನ್ನು ಹೊತ್ತುಕೊಂಡು ಬೆನ್ನಿಗೆ ಚಾಟಿಯಲ್ಲಿ ಹೊಡೆದುಕೊಂಡು ಭಿಕ್ಷೆ ಬೇಡಿ ಸಂಪಾದಿಸುತ್ತಿದ್ದ ಇವರು, ಇದೀಗ ಕುಲಕಸುಬು ಬಿಟ್ಟು ಕೂದಲು ಖರೀದಿ, ಮಿಕ್ಸಿ ರಿಪೇರಿ, ಗುಜರಿ ವ್ಯಾಪಾರ ಮಾಡುತ್ತಿದ್ದಾರೆ.
ಮೊದಲಿನಿಂದಲೂ ಅಲ್ಲಿ, ಇಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದ ಇವರಿಗೆ ಈಗಲೂ ಸ್ವಂತ ಊರಿಲ್ಲ, ಸೂರಿಲ್ಲ. ಇವರು ತೆಲುಗು ಬಲ್ಲವರಾಗಿದ್ದಾರೆ. 40 ವರ್ಷದ ಹಿಂದೆ ಮಹಾದೇವಿ ಟಾಕೀಸ್ ಬಳಿ ವಾಸಿಸುತ್ತಿದ್ದ ಅಲೆಮಾರಿ ಜನರನ್ನು ರೈಲ್ವೆ ಇಲಾಖೆ ಒಕ್ಕಲೆಬ್ಬಿಸಿತು. ಅವರಿಗೆ ಬೇರೆ ಕಡೆ ಭೂಮಿ ಕೊಟ್ಟರೂ ಗ್ರಾಮಸ್ಥರ ವಿರೋಧ ಹಿನ್ನೆಲೆ ಸದ್ಯ ಸಹ್ಯಾದ್ರಿ ಕಾಲೇಜು ಬಳಿಯ ಖಾಲಿ ಜಾಗದಲ್ಲಿ ವಾಸವಾಗಿದ್ದಾರೆ. ಮಕ್ಕಳು ಸಹ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿ, ತಂದೆ-ತಾಯಿ ಜೊತೆ ಕೂಲಿಗೆ ಹೋಗುತ್ತಿದ್ದಾರೆ. ಕಳೆದ ವರ್ಷ ಅನುಷಾ ಎಂಬ ಬಾಲಕಿ ಮೊದಲ ಬಾರಿ ಎಸ್ಎಸ್ಎಲ್ಸಿ ಓದಿ ತೇರ್ಗಡೆಯಾಗಿದ್ದಾಳೆ. ಕೆಲ ಸಂಘ-ಸಂಸ್ಥೆಗಳು ಅಲೆಮಾರಿ ಜನರ ಪರ ಹೋರಾಟ ಮಾಡಿ, ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿವೆ.
ಕೊರೊನಾ ಮೊದಲನೇ ಅಲೆಯಲ್ಲಿ ಈ ಕ್ಯಾಂಪ್ನ ಓರ್ವ ಯುವಕನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಆತನನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ಮೂರೇ ದಿನಕ್ಕೆ ಆತನನ್ನು ಮನೆಗೆ ಕಳುಹಿಸಲಾಯಿತು. ಅದನ್ನು ಹೊರತುಪಡಿಸಿದ್ರೆ ಈವರೆಗೂ ಯಾರಿಗೂ ಕೊರೊನಾ ತಗುಲಿಲ್ಲ.
ಇದನ್ನೂ ಓದಿ: ಲಾಕ್ಡೌನ್ ಸಮಯದಲ್ಲೂ ಶಾಲೆಗೆ ಹಾಜರು: ಪರಿಸರ ಕಾಳಜಿ ಮೆರೆದ ಹೊಂಗಳ್ಳಿ ಶಾಲೆಯ ಶಿಕ್ಷಕ