ಶಿವಮೊಗ್ಗ: ಅಡಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಕೇಂದ್ರಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ತೀ.ನಾ ಶ್ರೀನಿವಾಸ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2018ರಲ್ಲಿ ತೀರ್ಥಹಳ್ಳಿಗೆ ಬಂದಿದ್ದಾಗ ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ, ಇಂದು ಕೊಟ್ಟ ಮಾತು ಮರೆತಿದ್ದಾರೆ. ಇದೇ ತಿಂಗಳ 16ರಂದು ಅಮಿತ್ ಶಾ ಮತ್ತೊಮ್ಮೆ ಭದ್ರಾವತಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಸದರು, ಮುಖ್ಯಮಂತ್ರಿಗಳು ಅವರು ಕೊಟ್ಟ ಮಾತನ್ನು ನೆನಪಿಸುವ ಮೂಲಕ ಅಡಿಕೆ ಬೆಳೆಗಾರರ ಹಿತಾ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಬಹಿರಂಗ ಹೇಳಿಕೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಕಳೆದ ಆರು ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಕೂಡ ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕರ್ನಾಟಕದಲ್ಲಿ ಸುಮಾರು 15 ಜನ ಸಂಸದರು, 100ಕ್ಕೂ ಹೆಚ್ಚು ಜನ ಶಾಸಕರು ಅಡಿಕೆ ಬೆಳೆಗಾರರಾಗಿದ್ದಾರೆ. ಆದರೂ ಸಹ ಇವರ್ಯಾರು ಕೂಡ ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಮುಂದೆ ಬಂದಿಲ್ಲ. ಈ ಬಾರಿ ಅಮಿತ್ ಶಾ ಭದ್ರಾವತಿಗೆ ಆಗಮಿಸಿದಾಗ ಅಡಿಕೆ ಬೆಳೆಗಾರರ ರಕ್ಷಣೆ ಮಾಡುವುದಾಗಿ ಮಾತು ಕೊಟ್ಟಿದ್ದನ್ನು ನೆನಪಿಸಬೇಕು. ಜೊತೆಗೆ ಅಡಿಕೆ ಹಾನಿಕಾರಕವಲ್ಲ ಎಂಬ ಅಂಶವನ್ನು ಸುಪ್ರೀಂಕೋಟ್ಗೆ ಮನದಟ್ಟು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಅಡಿಕೆ ಸಂಶೋಧನೆ ಮಾಡಲು ಎಂ.ಎಸ್.ರಾಮಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಿದೆ. ಆದರೆ, ಈ ಸಂಸ್ಥೆಯ ಸಂಶೋಧನೆಯನ್ನು ಸುಪ್ರೀಂಕೋರ್ಟ್ ಒಪ್ಪುವುದಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ನಿಂದಲೇ ನೇರವಾಗಿ ಸಮಿತಿ ರಚಿಸಬೇಕು. ಈ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ಇತರ ಸಂಸದರು ಒತ್ತಡ ಹೇರಬೇಕು ಎಂದರು.
ಇನ್ನು, ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು, ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆಯನ್ನು ಬಗೆಹರಿಸಬೇಕು, ವಿಐಎಸ್ಎಲ್, ಎಂಪಿಎಂ ಉಳಿಯಬೇಕು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದರು.