ಶಿವಮೊಗ್ಗ: ಶಾಲೆಗಳಿಗೆ ನೀಡುವ ಆರ್ಟಿಇ ಶುಲ್ಕವನ್ನು ಸರ್ಕಾರ ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪಾಲಿಕೆ ಪ್ರತಿಪಕ್ಷದ ನಾಯಕ ಹೆಚ್.ಸಿ.ಯೋಗೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಜಿಲ್ಲೆಯ ವಿವಿಧ ಖಾಸಗಿ ಮಕ್ಕಳು ದಾಖಲಾತಿ ಪಡೆದಿದ್ದಾರೆ. ಈ ಶುಲ್ಕವನ್ನು ಸರ್ಕಾರವೇ ಭರಿಸಬೇಕಾಗಿದೆ. ಜಿಲ್ಲೆಯ ಶಾಲೆಗಳಿಗೆ 2018-19 ಹಾಗೂ 2019-20ನೇ ಸಾಲಿನಲ್ಲಿ ಬರಬೇಕಾದ ಸುಮಾರು 10,800 ವಿದ್ಯಾರ್ಥಿಗಳ ಒಟ್ಟು ಶುಲ್ಕ ₹ 9.08 ಕೋಟಿ ಬಾಕಿ ಇದೆ.
ಈಗಾಗಲೇ ಶಾಲೆಗಳು ಮುಚ್ಚಿದರೂ ಶಿಕ್ಷಕರಿಗೆ, ಸಿಬ್ಬಂದಿಗೆ, ವಾಹನ ಚಾಲಕರಿಗೆ ವೇತನ ನೀಡಬೇಕಾಗಿದೆ. ಖಾಸಗಿ ಶಾಲೆಗಳು ಸಂಕಷ್ಟದಲ್ಲಿದ್ದು, ತಕ್ಷಣವೇ ಸರ್ಕಾರ ಆರ್ಟಿಇ ಹಣವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಶುಲ್ಕ ಕಟ್ಟುವಂತೆ ಸಂದೇಶ ಕಳುಹಿಸುತ್ತಿವೆ. ಇದರಿಂದ ಪೋಷಕರು ಸಹ ಆತಂಕದಲ್ಲಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಶಾಲೆಗಳಿಗೆ ಬರಬೇಕಾದ ಶುಲ್ಕ ಮರು ಪಾತಿಸಬೇಕು ಎಂದು ಆಗ್ರಹಿಸಿದ್ದಾರೆ.