ಶಿವಮೊಗ್ಗ: ಯಡಿಯೂರಪ್ಪನವರ ಮೇಲೆ ವಿಶ್ವಾಸವಿಟ್ಟು ಮಂತ್ರಿ, ಶಾಸಕ ಸ್ಥಾನ ಬಿಟ್ಟು ಪಕ್ಷಕ್ಕೆ 14 ಜನ ಶಾಸಕರು ಬಂದಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂತು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಶಿವಮೊಗ್ಗದ ವಿನೋಬ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಜಿಲ್ಲೆಯ ರೈತರಿಗಾಗಿ 1,500 ಕೋಟಿಗೂ ಹೆಚ್ಚು ರೂ.ಗಳ ನೀರಾವರಿ ಯೋಜನೆ ಜಾರಿಗೆ ತಂದಿದ್ದಾರೆ. ಹಾಗೆಯೇ ಜಿಲ್ಲೆಯ ಅಭಿವೃದ್ಧಿಗಾಗಿ ಸಿಗಂದೂರು ಸೇತುವೆ, ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ ಜಾರಿಗೆ ತರುವ ಮೂಲಕ ಬಿ.ಎಸ್.ಯಡಿಯೂರಪ್ಪನವರು ಜಿಲ್ಲೆಯ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಜೊತೆಗೆ ಕಾರ್ಯಕರ್ತರ ಅಪೇಕ್ಷೆಯಂತೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಪಕ್ಷದ ಹಿರಿಯ ಮುಖಂಡ ಪದ್ಮನಾಭ ಪಟ್ಟ ಸೇರಿದಂತೆ ಪಕ್ಷದ ನಾಯಕರುಗಳು ಉಪಸ್ಥಿತರಿದ್ದರು.