ಶಿವಮೊಗ್ಗ : ಎದುರಿಗೆ ಬಂದ ಜಿಂಕೆಗೆ ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬೈಕ್ನ ಹಿಂಬದಿ ಸವಾರ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರದಲ್ಲಿ ನಡೆದಿದೆ. ತಾಲೂಕಿನ ತ್ಯಾಗರ್ತಿ ನಿವಾಸಿ ಪರಶುರಾಮ್ (30) ಎಂಬಾತ ಮೃತ ದುರ್ದೈವಿ. ಇವರು ಸಾಗರ ತಾಲೂಕಿನ ಬಿಜೆಪಿಯ ಎಸ್ಸಿ ಮೋರ್ಚಾದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಪರಶುರಾಮ್ ಹಾಗೂ ಮಂಜುನಾಥ್ ಎಂಬುವರು ಬೈಕ್ನಲ್ಲಿ ತ್ಯಾಗರ್ತಿಯಿಂದ ಸಾಗರಕ್ಕೆ ತೆರಳುವಾಗ ಬೊಮ್ಮತ್ತಿಯ ರೈಲ್ವೆ ಕ್ರಾಸ್ ಬಳಿ ದಿಢೀರನೆ ಬೈಕ್ಗೆ ಜಿಂಕೆ ಅಡ್ಡ ಬಂದಿದೆ. ಇದನ್ನು ತಪ್ಪಿಸಲು ಬ್ರೇಕ್ ಹಾಕಿದ್ದಾರೆ. ಆಗ ಹಿಂಬದಿ ಕುಳಿತಿದ್ದ ಪರಶುರಾಮ್ ನೆಲಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದಿದೆ.
ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದು ಕೊಂಡು ಹೋದರು ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಮಂಜುನಾಥ್ ಅವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.