ಶಿವಮೊಗ್ಗ: ಬೈಕ್ ಸವಾರರು ಹೆಲ್ಮೆಟ್ ಧರಿಸಿ ಸವಾರಿ ಮಾಡಿ ಜೀವ ರಕ್ಷಣೆ ಮಾಡಿ ಕೊಂಡು ತಮ್ಮ ಕುಟುಂಬವನ್ನು ರಕ್ಷಿಸಿ ಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹೆಲ್ಮೆಟ್ ಜಾಗೃತಿಗಾಗಿ ಬೈಕ್ ರ್ಯಾಲಿ ಜಾಥವನ್ನು ಶಿವಮೊಗ್ಗದಲ್ಲಿ ನಡೆಸಲಾಯಿತು. ಜಿಲ್ಲಾ ಎಸ್ಪಿ ಶಾಂತರಾಜು ರವರು ಬೈಕ್ ರ್ಯಾಲಿ ಜಾಥಾಕ್ಕೆ ಚಾಲನೆ ನೀಡಿದರು.
ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದಾಗ ಪೊಲೀಸರು ಹಿಡಿದು ದಂಡ ಹಾಕುವುದು ಅವರಿಗೆ ಶಿಕ್ಷೆ ನೀಡಬೇಕು ಎಂದು ಅಲ್ಲ ಬದಲಾಗಿ, ಮುಂದೆ ಈ ರೀತಿಯ ತಪ್ಪು ಮಾಡದಂತೆ ಜೀವ ಉಳಿಸಿಕೊಳ್ಳಲಿ ಎಂದು. ಬೈಕ್ ಸವಾರನನ್ನು ಆತನ ಇಡೀ ಕುಟುಂಬವೇ ಅವಲಂಬಿಸಿರುತ್ತದೆ. ಆದರೆ ಅವರು ಅವರ ತಲೆ ರಕ್ಷಣೆ ಮಾಡುವ ಹೆಲ್ಮೆಟ್ ನ್ನು ತೆಗೆದು ಕೊಳ್ಳುವ ಯೋಚನೆ ಮಾಡಿದಾಗ ಅವರು ಹಾಗೂ ಕುಟುಂಬ ಸುಖವಾಗಿರಬಹುದು ಎಂದು ಎಸ್ಪಿ ಶಾಂತರಾಜು ಹೇಳಿದರು.
ನಗರದ ಡಿಎಆರ್ ಮೈದಾನದಿಂದ ಬೈಕ್ ಜಾಥಾ ಪ್ರಾರಂಭವಾಗಿ ಅಶೋಕ ವೃತ್ತ, ಅಮೀರ್ ಅಹಮದ್ ವೃತ್ತ, ಟಿಎಸ್ ಬಿ ವೃತ್ತ , ಮಹಾವೀರ ವೃತ್ತ, ಕೆಇಬಿ ವೃತ್ತದ ಮೂಲಕ ಸಾಗಿ ಶಂಕರ ಮಠದ ರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಪುನಃ ಡಿಎಆರ್ ಮೈದಾನ ತಲುಪಿತು.