ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದೆ. ಏಪ್ರಿಲ್ 30ರಂದು ಮತ ಎಣಿಕೆ ನಡೆಯಲಿದೆ.
ಭದ್ರಾವತಿ ನಗರಸಭೆ ಚುನಾವಣೆ
ಭದ್ರಾವತಿಯ ನಗರಸಭೆಗೆ ಒಟ್ಟು 35 ವಾರ್ಡ್ಗಳಿವೆ. ಇದರಲ್ಲಿ ಒಂದು ವಾರ್ಡ್‌ನ ಅಭ್ಯರ್ಥಿ ಸಾವನ್ನಪ್ಪಿದ ಕಾರಣ ಚುನಾವಣೆಯನ್ನು ಮುಂದೂಡಲಾಗಿದೆ. ಸದ್ಯ 34 ವಾರ್ಡ್ಗಳ ಮತದಾನ ನಡೆಯಲಿದೆ. ಚುನಾವಣೆಗೆ 137 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಭದ್ರಾವತಿ ನಗರಸಭೆ ಮಟ್ಟದಲ್ಲಿ 60,355 ಪುರುಷ ಹಾಗೂ 66, 258 ಮಹಿಳೆಯರು ಸೇರಿ ಒಟ್ಟು 1,26,613 ಮತದಾರಿದ್ದಾರೆ. ಒಟ್ಟು 600 ಚುನಾವಣಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. 52 ಸೂಕ್ಷ್ಮ ಮತಗಟ್ಟೆ ಹಾಗೂ 20 ಅತಿಸೂಕ್ಷ್ಮ ಮತಗಟ್ಟೆಗಳಿವೆ. 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆ
ತೀರ್ಥಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಒಟ್ಟು 15 ವಾರ್ಡ್ಗಳಿದ್ದು, 15 ಮತಗಟ್ಟೆಗಳನ್ನು ರಚನೆ ಮಾಡಲಾಗಿದೆ. ಇಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಲ್ಲ. 5,784 ಪುರುಷ ಹಾಗೂ 6,317 ಮಹಿಳೆಯರು ಸೇರಿ ತೀರ್ಥಹಳ್ಳಿ ಪಟ್ಟಣದಲ್ಲಿ ಒಟ್ಟು 11,645 ಮತದಾರರಿದ್ದಾರೆ. ಒಟ್ಟು 72 ಚುನಾವಣಾ ಸಿಬ್ಬಂದಿ ಇದ್ದಾರೆ. 30 ಪೊಲೀಸರನ್ನು ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ.
ಮೀಸಲಾತಿ ವಿಚಾರವಾಗಿ ತಡವಾಗಿದ್ದ ಚುನಾವಣೆ:
ಭದ್ರಾವತಿ ಹಾಗೂ ತೀರ್ಥಹಳ್ಳಿಯ ಎರಡು ಕಡೆ ಮೀಸಲಾತಿ ಪ್ರಶ್ನಿಸಿ ಕೋರ್ಟ್ಗೆ ಹೋಗಲಾಗಿತ್ತು. ಇದರಿಂದ ಎರಡು ಕಡೆ ಸುಮಾರು 2 ವರ್ಷ ಚುನಾವಣೆ ನಡೆದಿರಲಿಲ್ಲ. ಚುನಾವಣೆಯನ್ನು ಎಲ್ಲಾ ರಾಜಕೀಯ ಪಕ್ಷದವರು ಶಾಂತಿಯುತವಾಗಿ ಹಾಗೂ ಕೋವಿಡ್ ನಿಯಮವಳಿಗಳ ಪ್ರಕಾರ ನಡೆಸಬೇಕೆಂದು ಶಿವಮೊಗ್ಗ ಉಪವಿಭಾಗಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ 14 ದಿನ ಕೋವಿಡ್ ಕರ್ಫ್ಯೂ.. ಕಠಿಣ ನಿಯಮ ಜಾರಿ