ಶಿವಮೊಗ್ಗ: ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ನೀಡದೆ ಇರುವುದು ಖಂಡನೀಯ. ನಾವು ಗಣೇಶನ ಮೂರ್ತಿ ಸ್ಥಾಪನೆ ಮಾಡಿಯೇ ತಿರುತ್ತೇವೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಸರ್ಕಾರ ಕೊರೊನಾ ನೆಪದಲ್ಲಿ ನಮ್ಮ ಧಾರ್ಮಿಕ ಆಚರಣೆಗೆ ಬ್ರೇಕ್ ಹಾಕಲು ಹೊರಟಿದೆ. ಒಂದು ವೇಳೆ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದೆ ಹೋದರೆ, ಯಡಿಯೂರಪ್ಪನವರ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿರವರು ಆಗಮಿಸಿ ಕಾರ್ಯಕ್ರಮ ನಡೆಸುವುದಾದರೆ, ನಾವು ಏಕೆ ಗಣೇಶೋತ್ಸವ ನಡೆಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಶ್ರೀರಾಮನ ಪ್ರತಿಷ್ಠಾಪನೆಯಿಂದ ದೇಶ ಪ್ರಗತಿ ಹೊಂದುತ್ತದೆ ಎಂದರೆ, ಅದೇ ರೀತಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಯಿಂದ ನಮ್ಮ ರಾಜ್ಯ ಅಭಿವೃದ್ಧಿಯಾಗಬಹುದು. ಅದಕ್ಕಾಗಿ ನಾವು ಗಣೇಶನನ್ನು ಪ್ರತಿಷ್ಠಾಪಿಸಿ, ವಿಜೃಂಭಣೆಯಿಂದ ಮೆರವಣಿಗೆ ನಡೆಸುತ್ತೆವೆ ಎಂದರು.
ಪ್ರವಾಹ ಸಂತ್ರಸ್ತರಿಗೆ ಸರಿಯಾಗಿ ಹಣ ನೀಡಿ :
ಜಿಲ್ಲೆಯಲ್ಲಿ ಈ ವರ್ಷ ಪ್ರವಾಹ ಉಂಟಾಗಿ ಸಾಕಷ್ಟು ಹಾನಿಯಾಗಿದೆ. ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಬಂದಿರುವೆ. ಇಲ್ಲಿ ಕಳೆದ ಬಾರಿಯೇ ಸರಿಯಾಗಿ ಪರಿಹಾರ ನೀಡಿಲ್ಲ. ಇನ್ನೂ ಈ ಪರಿಹಾರ ಎಷ್ಟರ ಮಟ್ಟಿಗೆ ರಾಜ್ಯ ಸರ್ಕಾರ ನೀಡಬಹುದು ಎಂದು ಯೋಚಿಸಬೇಕಿದೆ. ಸರ್ಕಾರಕ್ಕೆ ಕೈ ಮುಗಿದು ಪ್ರಾರ್ಥಿಸುತ್ತೆನೆ ದಯವಿಟ್ಟು ನಿರಾಶ್ರಿತರಿಗೆ ಪರಿಹಾರ ನೀಡಿ ಎಂದು ವಿನಂತಿಸಿ ಕೊಂಡರು.