ಶಿವಮೊಗ್ಗ : ಶಿಕಾರಿಪುರದಲ್ಲಿ ಇಂದು ಶ್ರೀ ಹುಚ್ಚರಾಯ ಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರಮದಿಂದ ಜರುಗಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆರಾಧ್ಯ ದೈವ ಹುಚ್ಚರಾಯ ಸ್ವಾಮಿ. ಈ ಹಿನ್ನೆಲೆ ಪ್ರತಿ ವರ್ಷ ಹುಚ್ಚರಾಯ ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ತಪ್ಪದೇ ಭಾಗಿಯಾಗುತ್ತಾರೆ. ಇಂದು ಸಹ ರಥೋತ್ಸವದಲ್ಲಿ ಯಡಿಯೂರಪ್ಪನವರು ತಮ್ಮ ಕುಟುಂಬಸ್ಥರೊಂದಿಗೆ ಭಾಗಿಯಾಗಿದ್ದರು.
ಯಡಿಯೂರಪ್ಪ ಅವರು ರಥೋತ್ಸವದಲ್ಲಿ ತಮ್ಮ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ತಮ್ಮ ಕುಟುಂಬ ಸಮೇತ ಭಾಗಿಯಾಗಿದ್ದರು. ರಥೋತ್ಸವಕ್ಕೂ ಮುನ್ನ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ನಂತರ ಹುಚ್ಚರಾಯ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹುಚ್ಚರಾಯ ಸ್ವಾಮಿಯ ರಥ ಎಳೆದರು.

ಇದನ್ನೂ ಓದಿ: 108 ಅಡಿಯ ಹನುಮಾನ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ದೇವಾಲಯವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುತ್ತದೆ. ಜಾತ್ರೆಯಲ್ಲಿ ವ್ಯಾಪಾರಕ್ಕೆ ಎಲ್ಲಾ ಸಮುದಾಯದವರಿಗೂ ಅವಕಾಶ ಮಾಡಿಕೊಡಲಾಗಿದೆ. ಜಾತ್ರೆಯಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಶಿಕಾರಿಪುರ ತಾಲೂಕಿನ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.