ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ನಾನು ಹೋರಾಟ ಮಾಡಿದ್ದೆ. ನಮ್ಮ ಪಕ್ಷದ ಎಲ್ಲಾ ಶಾಸಕರು ಇದಕ್ಕೆ ಬೆಂಬಲ ನೀಡಿದ್ದರು. ಮುಖ್ಯಮಂತ್ರಿಗಳು ವೇತನ ಬಿಡುಗಡೆಗೆ ವಾಗ್ದಾನ ನೀಡಿದ್ದರು. ಈಗ ಆರ್ಥಿಕ ಇಲಾಖೆಯ ಅನುಮೋದನೆಗೆ ಹೋಗಿದೆ. ಇನ್ನೇನು 87 ಕೋಟಿ ರೂ. ಬಾಕಿ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರ ಬಾಕಿ ಹಣ ಬಿಡುಗಡೆಯಾಗುತ್ತಿರುವ ಸುಳಿವು ಸಿಕ್ಕ ಕೂಡಲೇ ಕುಮಾರಸ್ವಾಮಿ ಅವರು ವಿಧಾನಪರಿಷತ್ ಚುನಾವಣೆ ಮತ ಗಳಿಸುವ ಹಿನ್ನೆಲೆ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ನಾವು ಈಗಾಗಲೇ ಅಡುಗೆ ಮಾಡಿದ್ದೇವೆ ಆದರೆ ಅವರು ಬಡಿಸಲು ಬರುತ್ತಿದ್ದಾರೆ. ಇಂತಹ ಗೋಸುಂಬೆ ರಾಜಕಾರಣಿಯನ್ನು ಅತಿಥಿ ಉಪನ್ಯಾಸಕರು ನಂಬುವುದಿಲ್ಲ ಎಂದು ಕಿಡಿಕಾರಿದರು.
ಕುಮಾರಸ್ವಾಮಿಯವರು ತಮ್ಮ ಅಧಿಕಾರದಲ್ಲಿದ್ದಾಗ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಯಾವ ಸಮಸ್ಯೆಯನ್ನು ಬಗೆಹರಿಸಿಲ್ಲ. ಹಾಗೆಯೇ ಎನ್ಪಿಎಸ್ ಹೋರಾಟಕ್ಕೆ ಬೆಂಬಲ ಕೊಡಲಿಲ್ಲ. ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಯಾವುದೇ ಹೋರಾಟವನ್ನು ಮಾಡಿಲ್ಲ. ಈಗ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದಾರೆ. ಹಾಗೆಯೇ ಉಪನ್ಯಾಸಕರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅತಿಥಿ ಉಪನ್ಯಾಸಕರು ಅವರ ಗೋಸುಂಬೆ ರಾಜಕಾರಣಕ್ಕೆ ಮರುಳಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ನೀಡಬಾರದು. ನಿಮ್ಮ ಪರ ಹೋರಾಡಿದ್ದೇನೆ. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಎಂದರು.