ಶಿವಮೊಗ್ಗ: ರಾಜ್ಯದಲ್ಲಿ ಮತ್ತೊಂದು ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂಬ ಕೂಗ ಕೇಳಿಬಂದಿದೆ.
ಈ ಕುರಿತು ಶಿವಮೊಗ್ಗ ಜಿಲ್ಲಾ ಪಶು ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ವಿನಯ್, ಸಿಎಂ ಯಡಿಯೂರಪ್ಪ ಹಾಗೂ ಸಂಸದರನ್ನು ಭೇಟಿ ಮಾಡಿ ಶಿವಮೊಗ್ಗದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ ಎಂಬ ಬೇಡಿಕೆ ಸಲ್ಲಿಸಿದ್ದಾರೆ. 19ನೇ ಜಾನುವಾರು ಗಣತಿಯ ಪ್ರಕಾರ ರಾಜ್ಯದಲ್ಲಿ 9 ಕೋಟಿ ಜಾನುವಾರುಗಳಿವೆ. ಇದರಲ್ಲಿ 3.5 ಕೋಟಿ ಎಮ್ಮೆಗಳು, 9.58 ಕೋಟಿ ಕುರಿಗಳು, 4.79 ಕೋಟಿ ಆಡುಗಳು, 9.70 ಲಕ್ಷ ಕುರಿಗಳು ಹಾಗೂ 30 ಲಕ್ಷ ಹಂದಿಗಳಿವೆ. ಈ ಹಿನ್ನೆಲೆಯಲ್ಲಿ ವಿವಿಯು ಉತ್ತಮ ಗುಣಮಟ್ಟದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಿಂದ ಜನಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಮತ್ತು ಆಯಾ ಭೌಗೋಳಿಕ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಸಾಧನೆ ತೋರಬಹುದಾಗಿದೆ. ಆದರೆ ರಾಜ್ಯದಲ್ಲಿರುವ ಏಕೈಕ ಪಶು ವೈದ್ಯಕೀಯ ವಿವಿ ಇದನ್ನು ಪೊರೈಸುವುದು ಅತ್ಯಂತ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಇನ್ನೊಂದು ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿವಿ ಅವಶ್ಯಕತೆ ಇದೆ ಎಂಬ ಬೇಡಿಕೆ ಇಡಲಾಗಿದೆ.
ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗಾಗಿ ಒಟ್ಟು 6 ವಿವಿಗಳಿವೆ. ಅವುಗಳೆಂದ್ರೆ:
1) ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು.
2) ಕೃಷಿ ವಿಶ್ವವಿದ್ಯಾಲಯ, ಧಾರವಾಡ.
3) ಕೃಷಿ ವಿಶ್ವವಿದ್ಯಾಲಯ, ರಾಯಚೂರು.
4) ಕೃಷಿ ಮತ್ತು ತೋಟಗಾರಿಕಾ ವಿವಿ, ಶಿವಮೊಗ್ಗ.
5) ತೋಟಗಾರಿಕಾ ವಿಶ್ವವಿದ್ಯಾಲಯ, ಬಾಗಲಕೋಟೆ.
6) ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿವಿ, ಬೀದರ್.
ಬೀದರ್ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿವಿಯಡಿ 7 ಪಶುವೈದ್ಯಕೀಯ ಮಹಾವಿದ್ಯಾಲಯ, 2 ಹೈನು ವಿಜ್ಞಾನ ಮಹಾವಿದ್ಯಾಲಯ, 10 ಸಂಶೋಧನಾ ಮತ್ತು ಮಾಹಿತಿ ಕೇಂದ್ರಗಳು, 2 ವಿಶೇಷ ಸಂಶೋಧನಾ ಸಂಸ್ಥೆಗಳು, 5 ಪಾಲಿಟೆಕ್ನಿಕ್ ಕಾರ್ಯನಿರ್ವಹಿಸುತ್ತಿವೆ. ಇಷ್ಟೆಲ್ಲಾ ಸಂಸ್ಥೆಗಳು ಒಂದೇ ವಿವಿ ಕೆಳಗೆ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತಿಲ್ಲ.
ಏಕೈಕ ಪಶುವಿಶ್ವವಿದ್ಯಾಲಯ ಇರುವುದು ಬೀದರ್ ಜಿಲ್ಲೆಯಲ್ಲಿ. ಇದು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಬಹು ದೂರುವಾಗಿದೆ. ಇಲ್ಲಿಂದ ಬೀದರ್ಗೆ ಪ್ರಯಾಣ ಮಾಡಬೇಕಾದ್ರೆ ಕನಿಷ್ಠ 1,200 ಕಿ.ಮೀ. ದೂರ ಕ್ರಮಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬೀದರ್ ವಿವಿ ಭೌಗೋಳಿಕವಾಗಿ ದೂರದಲ್ಲಿದೆ. ಇದರಿಂದಾಗಿ ದಕ್ಷಿಣ ಕರ್ನಾಟಕದವರಿಗೆ ಹತ್ತಿರವಾಗಬೇಕೆಂಬ ದೃಷ್ಟಿಯಿಂದ ಮಧ್ಯ ಕರ್ನಾಟಕ ಶಿವಮೊಗ್ಗದಲ್ಲಿ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯಲ್ಲೇ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಸ್ಥಾಪನೆಗೆ ಎಲ್ಲಾ ರೀತಿಯ ಸೌಲಭ್ಯಗಳಿವೆ. ಹಾಲಿ ಕಾಲೇಜಿನಲ್ಲಿ 173 ಎಕರೆ ಭೂಮಿ ಇದೆ. ಜೊತೆಗೆ ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಲಭ್ಯವಿದೆ. ಶಿವಮೊಗ್ಗದಲ್ಲಿ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿವಿ ಸ್ಥಾಪನೆಯ ಅವಶ್ಯಕತೆ ಮತ್ತು ಜಿಲ್ಲೆಯಲ್ಲಿ ಇರುವ ಸೌಕರ್ಯಗಳ ಕುರಿತು ಸಿಎಂ ಯಡಿಯೂರಪ್ಪನವರಿಗೆ ಪಶುವೈದ್ಯರ ಸಂಘ ತಿಳಿಸಿಕೊಟ್ಟಿದ್ದು, ನಮ್ಮ ಮನವಿಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಡಾ. ವಿನಯ್ ತಿಳಿಸಿದರು.