ಶಿವಮೊಗ್ಗ: ಬೇಸಿಗೆ ಬಿಸಿಲಿನ ಝಳಕ್ಕೆ ಬಸವಳಿದಿರುವ ಮಲೆನಾಡಿನಲ್ಲೀಗ, ಮುಂಗಾರು ಮಳೆಯದ್ದೇ ಧ್ಯಾನ ಶುರುವಾಗಿದೆ. ಈಗಾಗಲೇ, ಮುಂಗಾರು ಆರಂಭಗೊಂಡು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಳ್ಳಬೇಕಾಗಿತ್ತು. ಆದರೆ, ಮಣ್ಣಿಗೆ ಮುಂಗಾರು ಮಳೆ ಇನ್ನೂ ಸರಿಯಾಗಿ ತಾಗಿಲ್ಲ.
ಭೂಮಿಗೆ ನೇಗಿಲಿಳಿಸಿ ಹೂಳಲಾರಂಭಿಸಬೇಕಿದ್ದ ರೈತ, ಮಣ್ಣಿನ ಹದಕ್ಕಾಗಿ ಕಾಯುತ್ತಿದ್ದಾನೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ಕೂಡ ತಯಾರಿ ನಡೆಸಿದೆದ್ದು, ಬೀಜ, ರಸಗೊಬ್ಬರ ಸಂಗ್ರಹ ಮಾಡಿಕೊಂಡಿದೆ. ಆದರೆ, ರೈತ ಮುಗಿಲಿನ ಕಡೆ ಮುಖ ಮಾಡಿ ಮುಂಗಾರಿನ ವರ್ಷಧಾರೆಗೆ ಕಾಯುತ್ತಿದ್ದಾನೆ.
ಶಿವಮೊಗ್ಗ ಜಿಲ್ಲೆಯ ವಾರ್ಷಿಕ ಸರಾಸರಿ ವಾಡಿಕೆ ಮಳೆಯು 2237.5 ಮಿ.ಮೀ ಇದ್ದು, ಮೇ ಅಂತ್ಯದ ವೇಳೆಗೆ 136.9 ಮಿ.ಮೀ ಆಗಬೇಕಿತ್ತು. ಆದರೆ ಇದುವರೆಗೂ ಕೇವಲ 56.69 ಮಿ.ಮೀ ಆಗಿದ್ದು, ಶೇ.43 ರಷ್ಟು ಮಳೆ ಕೊರತೆ ಉಂಟಾಗಿದೆ. ಅಲ್ಲದೇ ಈ ಮುಂಗಾರು ಹಂಗಾಮಿನಲ್ಲಿ, ಜಿಲ್ಲೆಯ ಒಟ್ಟು ಕೃಷಿ ಬೆಳೆ, 1,59,457 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಮುಖ ಬೆಳೆಗಳಾಗಿರುವ ಭತ್ತ, ಮುಸುಕಿನ ಜೋಳ, ದ್ವಿದಳ ಧಾನ್ಯ, ಏಕದಳ, ಎಣ್ಣೆಕಾಳು, ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸಬೇಕಾಗಿದ್ದರೂ, ಮುಂಗಾರಿನ ಕೊರತೆ ಹಿನ್ನೆಲೆಯಲ್ಲಿ ಇವೆಲ್ಲವೂ ರೈತ ತಡೆ ಹಿಡಿದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಹೀಗಾಗಿ ಕೃಷಿ ಇಲಾಖೆ ತಯಾರಿ ನಡೆಸಿದ್ದು, ಬೀಜ ಮತ್ತು ರಸಗೊಬ್ಬರ ಸೇರಿದಂತೆ, ಅಗತ್ಯ ಪರಿಕರಗಳ ಸಂಗ್ರಹ ಮಾಡಿಕೊಂಡಿದೆ. ರೈತರಿಗೆ ಸಮರ್ಪಕ ವಿತರಣೆಗಾಗಿ ಕಾಪು ದಾಸ್ತಾನಿನಡಿ ಶೇಖರಣೆ ಮಾಡಲಾಗಿದ್ದು, ಬೀಜ ಮತ್ತು ರಸಗೊಬ್ಬರ ವಿತರಣೆಗೆ ಕೃಷಿ ಇಲಾಖಾಧಿಕಾರಿಗಳು ತಯಾರಿ ಮಾಡಿಕೊಂಡಿದ್ದು, ಮಳೆಯಾದ ಕಡೆಗಳಲ್ಲಿ ವಿತರಣೆ ಮಾಡಲಾಗುತ್ತಿದೆ.
ಯೂರಿಯಾ-3006 ಟನ್, ಡಿಎಪಿ-1,347 ಟನ್, ಎಂಓಪಿ-1,065 ಟನ್, ಕಾಂಪ್ಲೆಕ್ಸ್ -2,203 ಟನ್, ಹೀಗೆ ಒಟ್ಟು 7,621 ಟನ್ನಷ್ಟು ಗ್ರೇಡ್ ವಾರು ರಸಗೊಬ್ಬರ ದಾಸ್ತಾನು ಶೇಖರಣೆ ಮಾಡಲಾಗಿದ್ದು, ರೈತರಿಗೆ ವಿತರಿಸಲು ಕೃಷಿ ಇಲಾಖೆ ಸೂಕ್ತ ಕ್ರಮಗಳನ್ನ ತೆಗೆದುಕೊಂಡಿದೆ. ಆದರೆ ಇದಕ್ಕೆ ಮಳೆಯೇ ಬರಲಿಲ್ಲ ಎಂದಾದಲ್ಲಿ ಇವೆಲ್ಲವೂ ತೆಗೆದುಕೊಂಡು ಏನು ಮಾಡೋದು ಎಂಬ ಪ್ರಶ್ನೆ ಇದೀಗ ರೈತರದ್ದಾಗಿದೆ. ಜಿಲ್ಲೆಯ ಕೆಲ ಕಡೆ ಮಾತ್ರ ಮಳೆಯಾಗಿದ್ದು, ಆ ಭಾಗದ ರೈತರು ಮಾತ್ರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇನ್ನೂ ಉಳಿದ ಕೆಲ ಭಾಗದ ರೈತರು ಯಾವುದೇ ರೀತಿಯ ತಯಾರಿ ನಡೆದಿಲ್ಲ.
ಒಟ್ಟಿನಲ್ಲಿ ಕಳೆದ 10 ದಿನಗಳಿಂದ ಬಿಸಿಲಿನ ಬೇಗೆಯ ನಡುವೆಯೇ ಆಗಾಗ ಮೋಡ ಮುಸುಕಿದ ವಾತಾವರಣ ಜೊತೆಗೆ ಅಲ್ಲಲ್ಲಿ ಮಳೆ ಆಗುತ್ತಿರುವುದು ಕಂಡು ಬಂದಿದ್ದರೂ ಕೂಡ, ವಾಡಿಕೆ ಮಳೆ ಬಾರದೇ ರೈತ ಕಂಗಾಲಾಗಿರುವುದಂತೂ ಸತ್ಯ. ಮಳೆ ಬಾರದೇ ಇದ್ದರೆ, ಮಳೆ ಕ್ಷೀಣವಾದರೆ, ಮುಂಗಾರು ಹಂಗಾಮು ಸಂಬಂಧ, ಸರ್ಕಾರದ ಮುಂದಿನ ಹೆಜ್ಜೆ ಏನು ಮತ್ತು ಸರ್ಕಾರ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಿದೆ ಎಂಬುದು ಇದೀಗ ಪ್ರಶ್ನೆಯಾಗಿದೆ.