ಶಿವಮೊಗ್ಗ : ಸಂಪುಟ ರಚನೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ನನ್ನನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನನಿತ್ಯ ಈ ಬಗ್ಗೆ ಚರ್ಚೆ ಆಗುತ್ತಿದೆ. ವಿಜಯೇಂದ್ರ ಹಾಗು ರಾಘವೇಂದ್ರ ಅವರನ್ನು ಪಕ್ಷ ಗುರುತಿಸಬೇಕು ಎಂಬುದು ಯಡಿಯೂರಪ್ಪ ಅವರ ಅಪೇಕ್ಷೆ. ನಮಗೆ ಸಚಿವ ಸ್ಥಾನ ನೀಡುವುದಕ್ಕಾಗಿ ಯಡಿಯೂರಪ್ಪ ಯಾವುದೇ ಲಾಬಿ ಮಾಡಿಲ್ಲ, ಮಾಡುವುದಿಲ್ಲ. ನಾನು ಚುನಾವಣೆಗೆ ನಿಲ್ಲಬೇಕೋ, ಬೇಡವೋ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ರಾಜ್ಯದಲ್ಲಿ ಪಕ್ಷದ ಸಂಘಟನೆ ಮಾಡುವ ಉದ್ದೇಶದಿಂದ ಮೂರು ತಂಡದಲ್ಲಿ ಪ್ರವಾಸ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಮೂರು ಜಿಲ್ಲೆಗಳ ಕಾರ್ಯಕರ್ತರ ಸಭೆ ನಡೆಯುತ್ತಿದೆ ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಅವರ ಕನಸು ಕನಸಾಗಿಯೇ ಉಳಿಯುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬೇಕು, ರಾಜ್ಯದಲ್ಲಿ ಗೊಂದಲ ಉಂಟು ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ವಿಷ ಬೀಜ ಬಿತ್ತುತ್ತಿರುವುದಾಗಿ ಬಿ.ವೈ ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಓದಿ : ಕರ್ತವ್ಯಕ್ಕೆ ಹಾಜರಾದ ದಿನವೇ ಲಂಚ ಆರೋಪ; ಪ್ರೊಬೇಷನರಿ ಅಬಕಾರಿ ನಿರೀಕ್ಷಕಿ ಎಸಿಬಿ ವಶಕ್ಕೆ