ಶಿವಮೊಗ್ಗ : ಸಿಎಂ ತವರು ಜಿಲ್ಲೆ ಶಿವಮೊಗ್ಗಕ್ಕೆ ಅನುದಾನಕ್ಕೇನೂ ಭರವಿಲ್ಲ. ಖುದ್ದು ಸಿಎಂ ಯಡಿಯೂರಪ್ಪ ಅವರು ತಮ್ಮ ಜಿಲ್ಲೆಗೆ ಸಾಲು ಸಾಲು ಯೋಜನೆಗಳನ್ನು ಮಂಜೂರು ಮಾಡುತ್ತಿದ್ದಾರೆ. ಇದರ ಜೊತೆಗೆ ಸಿಎಂ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಅವರ ಶ್ರಮದಿಂದಾಗಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಅನುದಾನ ಮಂಜೂರಾಗುತ್ತಿದೆ.
ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರತಿ ವರ್ಷ ಜಿಲ್ಲೆಗೆ ಸಾವಿರಾರು ಕೋಟಿ ರೂ. ಅನುದಾನ ಮಂಜೂರಾಗುತ್ತಿದೆ. ರಾಜ್ಯದ ಬೇರೆಲ್ಲಾ ಜಿಲ್ಲೆಗಳಿಗಿಂತಲೂ ಹೆಚ್ಚಿನ ಅನುದಾನ ಸಿಗುತ್ತಿರುವ ಜಿಲ್ಲೆ ಎನ್ನುವ ಖ್ಯಾತಿಗೆ ಶಿವಮೊಗ್ಗ ಪಾತ್ರವಾಗಿದೆ.
ಜಿಲ್ಲೆಗೆ 2020-21ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬರೋಬ್ಬರಿ 7,234 ಕೋಟಿ ರೂ. ಅನುದಾನ ಮಂಜೂರಾಗಿ ಸಿಗಂದೂರು ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ಭರದಿಂದ ಸಾಗುತ್ತಿವೆ.
ಇದರ ಮಧ್ಯೆ ಈ ಬಾರಿಯೂ ಜಿಲ್ಲೆಯ ಐದು ಕಾಮಗಾರಿಗಳಿಗೆ ಬರೋಬ್ಬರಿ 606 ಕೋಟಿ ರೂ. ಅನುದಾನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿದ್ದು, ಶೀಘ್ರವೇ ಈ ಎಲ್ಲ ಕಾಮಗಾರಿಗಳು ಆರಂಭಗೊಳ್ಳಲಿವೆ. ಇದರ ಜೊತೆಗೆ ಐದು ಕಾಮಗಾರಿಗಳ ಡಿಪಿಆರ್ ತಯಾರಿಸಲು 5.3 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ಬಿಡುಗಡೆಯಾದ ಜಿಲ್ಲೆ ಎಂಬ ಕೀರ್ತಿಗೆ ಶಿವಮೊಗ್ಗ ಪಾತ್ರವಾಗಿದೆ.
ಶಿವಮೊಗ್ಗದ ಸಂದೇಶ್ ಮೋಟರ್ಸ್ನಿಂದ ಹೊಸಳ್ಳಿವರೆಗೆ 38 ಕೋಟಿ ರೂಪಾಯಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ, ಬೈಂದೂರಿಂದ ರಾಣೆಬೆನ್ನೂರುವರೆಗಿನ 166ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಳಾಗಿರುವ 30 ಕಿಲೋಮೀಟರ್ ರಸ್ತೆ ದುರಸ್ತಿಗೆ 210 ಕೋಟಿ ರೂ., ತುಮಕೂರು ಹೊನ್ನಾವರ ಹೆದ್ದಾರಿ 206ರ ತ್ಯಾವರೆಕೊಪ್ಪದಿಂದ 30 ಕಿಲೋಮೀಟರ್‌ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಹಾಗೂ ಕುಂಸಿಯಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ 325 ಕೋಟಿ ರೂಪಾಯಿ ಹಾಗೂ ಹೊಳೆಹೊನ್ನೂರು ಹಳೆ ಸೇತುವೆ ದುರಸ್ಥಿಗೆ 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ.
ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ನಾಗಾಲೋಟವೇ ನಡೆಯುತ್ತಿದೆ. ಒಂದು ಕಡೆ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗುತ್ತಿದ್ದರೆ, ಇನ್ನೊಂದೆಡೆ ಹೆದ್ದಾರಿ ಕಾಮಗಾರಿಗಳೂ ಭರದಿಂದ ಸಾಗಿವೆ.
ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟು ಕಹಿ ತಿನ್ನುವ ಅನುಭವ : ಷರತ್ತುಗಳೊಂದಿಗೆ ಸಾರಿಗೆ ಸಿಬ್ಬಂದಿಗೆ ವೇತನ ಬಿಡುಗಡೆ