ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿ ಮೂರು ವರ್ಷ ಕಳೆದ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಹಾಗೂ ಎನ್ಎಸ್ಯುಐ ಸಂಘಟನೆ ವತಿಯಿಂದ ಕರಾಳ ದಿನವನ್ನಾಗಿ ಆಚರಿಸಲಾಯಿತು.
ನಗರದ ಕಾಂಗ್ರೆಸ್ ಕಚೇರಿಯಿಂದ ಮಹಾವೀರ ಸರ್ಕಲ್ ವರೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಕಪ್ಪು ಶರ್ಟ್ ಧರಿಸಿ ಹಾಗೂ ಮೋದಿ ಭಾವಚಿತ್ರವಿರುವ ಬ್ಯಾನರ್ಗೆ ಬೆಂಕಿ ಹಚ್ಚಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ನೋಟು ಅಮಾನ್ಯೀಕರಣದಿಂದಾಗಿ ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ದೇಶದಲ್ಲಿ ಉದ್ಯೋಗ ಸಮಸ್ಯೆ ಸೃಷ್ಟಿ ಆಗಿದೆ, ಕೈಗಾರಿಕೆಗಳು ಮುಚ್ಚುತ್ತಿವೆ, ಕೃಷಿ ಕ್ಷೇತ್ರ ಅಪಾಯದಲ್ಲಿದೆ. ಇದಕ್ಕೆಲ್ಲಾ ಮೋದಿ, ಸರ್ವಾಧಿಕಾರಿ ರೀತಿಯಲ್ಲಿ ತೆಗೆದುಕೊಂಡ ನೋಟು ಅಮಾನ್ಯೀಕರಣ ನೀತಿಯೇ ಕಾರಣ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಇನ್ನೊಂದೆಡೆ ನಗರದ ಗಾಂಧಿ ಪಾರ್ಕ್ನಲ್ಲಿರುವ ಗಾಂಧಿ ಪ್ರತಿಮೆ ಎದುರು ಎನ್ಎಸ್ಯುಐ ಸಂಘಟನೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿತು. ನರೇಂದ್ರ ಮೋದಿ ಅವರು ಅಚ್ಚೆ ದಿನ್ ಅಂತ ಹೇಳಿ ಅಧಿಕಾರಕ್ಕೆ ಬಂದು ಜನ ಸಾಮಾನ್ಯರಿಗೆ ಅನ್ಯಾಯ ಮಾಡಿದ್ದಾರೆ, ದೇಶವನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳುತ್ತಿದ್ದಾರೆ. 2016 ರ ನವೆಂಬರ್ನಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದರು. ನನಗೆ 50 ದಿನ ಕಲಾವಕಾಶ ನೀಡಿ ನಾನು ಎಲ್ಲವನ್ನು ಸರಿ ಮಾಡುತ್ತೇನೆ ಎಂದು ಹೇಳಿ ಮಾಡಲಿಲ್ಲ. ನೋಟ್ ಬ್ಯಾನ್ ಆದಾಗಿನಿಂದ ದೇಶದ ಆರ್ಥಿಕ ಸ್ಥಿತಿ ದಿನೇ ದಿನೇ ಕುಸಿಯುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಲ್ಲಣಗಳು ಶುರುವಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.