ಮೈಸೂರು : ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಬಿಲ್ಡಿಂಗ್ಗಳನ್ನು ಕೆಡವಿ ಮರು ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿರುವ ಬಗ್ಗೆ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದು, ಮೈಸೂರು ಅರಮನೆ ಕಟ್ಟಿ ನೂರು ವರ್ಷ ಮೇಲಾಗಿದೆ.
ಇದು ಹಳೆಯದು ಎಂದು ಕೆಡವಿ ಬೇರೆ ಕಟ್ಟಡ ಕಟ್ಟಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು. ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಶಿಥಿಲಾವಸ್ಥೆಯಲ್ಲಿದೆ ಎಂದು ತೀರ್ಮಾನ ಮಾಡಿ ಅವುಗಳನ್ನು ಪಾರಂಪರಿಕ ರೀತಿಯಲ್ಲೇ ಹೊಸದಾಗಿ ನಿರ್ಮಾಣ ಮಾಡಲು ಕಳೆದ ವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಈಗಾಗಲೇ ಸರ್ಕಾರದ ತೀರ್ಮಾನ ಸರಿಯಲ್ಲ ಎಂದು ದೇವರಾಜ ಮಾರುಕಟ್ಟೆಯ ವರ್ತಕರ ಸಂಘ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಹಾರಾಜರಾದ ಯದುವೀರ್ ಅವರನ್ನು ಭೇಟಿ ಮಾಡಿ ಪ್ರತಿಭಟನೆ ನಡೆಸಲು ಬೆಂಬಲ ಕೋರಿದ್ದರು. ಇದಕ್ಕೆ ಒಪ್ಪಿದ ಮಹಾರಾಜರು ಇಂದು ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾಧ್ಯಮದವರ ಜೊತೆ ಮಾತನಾಡಿದರು.
ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆ ಕೇವಲ ಮಾರುಕಟ್ಟೆಯಲ್ಲ, ಇದು ಸಂಸ್ಕೃತಿಯ ಪಾರಂಪರಿಕ ಸಂಬಂಧ ಹೊಂದಿದೆ, ನೂರು ವರ್ಷ ಆಗಿದೆ ಎಂದು ಪಾರಂಪರಿಕ ಕಟ್ಟಡವನ್ನ ಕೆಡವಲು ಸಾಧ್ಯವೇ? ಹಾಗಾದರೆ ನೂರು ವರ್ಷ ಆಗಿರುವ ಮೈಸೂರು ಅರಮನೆಯನ್ನು ಕೆಡವಿ ಬೇರೆ ಕಟ್ಟಲು ಸಾಧ್ಯವೇ?, ಒಂದು ಪಾರಂಪರಿಕ ಕಟ್ಟಡ ಕೆಡವಿದ ಮೇಲೆ ಅದೇ ಮಾದರಿಯಲ್ಲಿ ಕಟ್ಟಿದರೂ ಆ ಕಟ್ಟಡಕ್ಕೆ ಇತಿಹಾಸ ಮತ್ತು ಪಾರಂಪರಿಕತೆ ಎರಡು ಬರುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ತಜ್ಞರ ಸಮಿತಿ ನೇಮಿಸಿ : ಪಾರಂಪರಿಕ ಕಟ್ಟಡಗಳ ಸ್ಥಿತಿಗತಿ ಪರಿಶೀಲನೆಗೆ ತಜ್ಞರ ಸಮಿತಿಯನ್ನ ನೇಮಿಸಬೇಕು. ಜೊತೆಗೆ ಜನರ ಅಭಿಪ್ರಾಯಗಳಿಗೆ, ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ. ರಾಜರ ಖಾಸಗಿ ಆಸ್ತಿ ನವೀಕರಣ ಹಾಗೂ ಪಾರಂಪರಿಕ ಕಟ್ಟಡಗಳ ನಡುವೆ ಸಂಬಂಧವನ್ನು ಕಲ್ಪಿಸಬೇಡಿ. ರಾಜರು ತಮ್ಮ ಆಸ್ತಿಗಳನ್ನ ನವೀಕರಣ ಮಾಡಿಕೊಳ್ಳುತ್ತಿದ್ದಾರೆ. ಅದು ಪಾರಂಪರಿಕತೆ ಉಳಿಸಿಕೊಂಡು ನವೀಕರಣ ಮಾಡಲಾಗುತ್ತಿದೆ. ನಗರದಲ್ಲಿರುವ ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ ತಜ್ಞರ ಸಮಿತಿ ನೇಮಿಸಬೇಕೆಂದು ಸಲಹೆ ನೀಡಿದರು.
ದೇವರಾಜ ಮಾರುಕಟ್ಟೆ ನಮ್ಮ ವ್ಯಾಪ್ತಿಗೆ ನೀಡಿದರೇ ನಮ್ಮ ಟ್ರಸ್ಟ್ ವತಿಯಿಂದ ಪುನಶ್ಚೇತನ ಮಾಡುತ್ತೇವೆ ಎಂಬ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದನ್ನು ಅವರ ಬಳಿಯೇ ಕೇಳಿ ಎಂದು ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿಕೆ ನೀಡಿ, ಪಾರಂಪರಿಕ ಕಟ್ಟಡಗಳ ಉಳಿವಿಗೆ ರಾಜ ಮನೆತನದ ಬೆಂಬಲ ಇರುತ್ತದೆ ಎಂದರು.
ಬಿಕೋ ಎನ್ನುತ್ತಿರುವ ದೇವರಾಜ ಮಾರುಕಟ್ಟೆ: ದೇವರಾಜ ಮಾರ್ಕೆಟ್ ನೆಲಸಮ ಮಾಡದಂತೆ ಒತ್ತಾಯಿಸಿ, ವ್ಯಾಪಾರಿಗಳು ಬೀದಿಗಳಿದ ಹಿನ್ನೆಲೆಯಲ್ಲಿ ದೇವರಾಜ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ಮಾಡಿ ಹೊಸದಾಗಿ ಕಟ್ಟುವಂತೆ ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆ ಮತ್ತು ಲಾನ್ಸ್ ಡೌನ್ ಬಿಲ್ಡಿಂಗ್ ನೆಲಸಮಗೊಳಿಸದಂತೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ. ದೇವರಾಜ ಮಾರುಕಟ್ಟೆಯಿಂದ ಹೊರಟ ಪ್ರತಿಭಟನೆ ಮೆರವಣಿಗೆ, ದೇವರಾಜ ಅರಸು ರಸ್ತೆ ಮುಖಾಂತರ, ಮೆಟ್ರೋಪೋಲ್ ವೃತ್ತದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ತಲುಪಿದೆ.
ಇದನ್ನೂ ಓದಿ: ತರಕಾರಿ ಬಲು ದುಬಾರಿ.. ರಾಜ್ಯದಲ್ಲಿ ಇಂದಿನ ಮಾರುಕಟ್ಟೆ ದರ ಹೀಗಿದೆ..