ಮೈಸೂರು: ನಾಡಹಬ್ಬ ಮೈಸೂರು ದಸರಾ ನಂತರ ನಡೆಯುವ ಚಾಮುಂಡೇಶ್ವರಿ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದ್ದಾರೆ.
ಮುಂಜಾನೆಯಿಂದಲೇ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆಸಿದ ನಂತರ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಆ ನಂತರ 7:18 ರಿಂದ 7:40ರ ಶುಭಲಗ್ನದಲ್ಲಿ ಯದುವೀರ್ ಸಾಂಪ್ರದಾಯಿಕ ರಥೋತ್ಸವಕ್ಕೆ ಚಾಲನೆ ಕೊಟ್ಟರು. ಈ ರಥೋತ್ಸವದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ಭಾಗವಹಿಸಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಸರಳ ಆಚರಣೆ:
ರಥೋತ್ಸವದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯದುವೀರ್, 'ಕೋವಿಡ್ ಕಾರಣಕ್ಕೆ ಈ ಬಾರಿ ಕಳೆದ ಬಾರಿಯಂತೆ ಸರಳ ಸಾಂಪ್ರದಾಯಿಕ ರಥೋತ್ಸವ ನಡೆಸಲಾಯಿತು. ಮುಂದಿನ ವರ್ಷ ಕೋವಿಡ್ ಮುಕ್ತವಾಗಿ ದೇವಿ ಅದ್ಧೂರಿಯಾಗಿ ರಥೋತ್ಸವ ಆಚರಿಸುವ ಶಕ್ತಿ ನೀಡಲಿ. ನಾಡಿಗೆ ಉತ್ತಮ ಮಳೆ, ಬೆಳೆ ಆಗಲಿ ಎಂದು ದೇವಿಯನ್ನು ಪ್ರಾರ್ಥಿಸುತ್ತೇವೆ' ಎಂದರು.
ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಮಾತನಾಡಿ, 'ಬೆಳಿಗ್ಗೆಯಿಂದಲೇ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರವನ್ನು ಮಾಡಲಾಯಿತು. ಈ ಬಾರಿ ಸಂಪ್ರದಾಯದಂತೆ ದೇವಿಯನ್ನು ಶೃಂಗಾರಗೊಳಿಸಿ ಚಿಕ್ಕ ರಥದಲ್ಲಿಟ್ಟು ರಥೋತ್ಸವ ನಡೆಸಲಾಯಿತು' ಎಂದು ತಿಳಿಸಿದರು.
ಕುಶಾಲತೋಪಿನ ಸಂಪ್ರದಾಯ:
ದಸರಾ ಜಂಬೂಸವಾರಿಯ ಸಂದರ್ಭದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಇರುವ ಚಿನ್ನದ ಅಂಬಾರಿ ಹೊರಡುವ ಮುನ್ನ 21 ಕುಶಾಲತೋಪುಗಳನ್ನು ಹಾರಿಸಲಾಗುತ್ತದೆ. ಅದೇ ರೀತಿ ದಸರಾ ಮುಗಿದ ನಾಲ್ಕನೇ ದಿನ ಚಾಮುಂಡೇಶ್ವರಿ ರಥೋತ್ಸವ ಸಾಗುವ ದೇವಸ್ಥಾನದ ಸುತ್ತ ಕುಶಾಲತೋಪುಗಳನ್ನು ಹಾರಿಸುವ ಸಂಪ್ರದಾಯ ಇರುವುದು ಚಾಮುಂಡಿ ಬೆಟ್ಟದಲ್ಲಿ ಮಾತ್ರ. ಆ ಸಂಪ್ರದಾಯದಂತೆ ರಥೋತ್ಸವ ಜರುಗಿತು.
ಇದನ್ನೂ ಓದಿ: ಪರಿಷತ್ ಚುನಾವಣೆಗೆ ಟಿಕೆಟ್ ಕಸರತ್ತು: ಹುಕ್ಕೇರಿ, ಹೆಬ್ಬಾಳ್ಕರ್ ಸೇರಿ ಘಟಾನುಘಟಿಗಳ ಲಾಬಿ
ಇಂದು ಸಂಜೆ ಹಂಸವಾಹನ ಮತ್ತು ಸಿಂಹವಾಹನದಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಗುತ್ತದೆ. ರಾತ್ರಿ ಮಂಟಪೋತ್ಸವ ನಡೆಯುತ್ತದೆ. ಅಕ್ಟೋಬರ್ 21ಕ್ಕೆ ತೆಪ್ಪೋತ್ಸವ ಇಲ್ಲದ ಕಾರಣ ತೀರ್ಥಸ್ನಾನ ನೆರವೇರುವುದರೊಂದಿಗೆ ಈ ಬಾರಿಯ ಶರನ್ನವರಾತ್ರಿಯ ಪೂಜಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ.