ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳನ್ನು ನೆಲಸಮ ಮಾಡಿ ಪುನರ್ ನಿರ್ಮಾಣ ಮಾಡುವುದಕ್ಕೆ ಪಾಲಿಕೆ ತೆಗೆದುಕೊಂಡ ನಿರ್ಣಯದ ಮೇಲೆ ರಾಜವಂಶಸ್ಥ ಯದುವೀರ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮೈಸೂರಿನ ನಾಗರಿಕರು ನಂಬಿಕೆ ಇಟ್ಟಿರುವ ಒಂದು ಸಂಸ್ಥೆ ಮೈಸೂರು ಮಹಾನಗರ ಪಾಲಿಕೆ. ಆದರೆ, ಈಗ ಅದು ವಿರುದ್ಧದ ನಡೆ ಇಟ್ಟಿದೆ ಎಂದು ಯದುವೀರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಟ್ಟಡ ನೆಲಸಮ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ, ನಮ್ಮ ಪರಂಪರೆಯನ್ನು ಪಾಲಿಕೆ ಸಂರಕ್ಷಿಸುತ್ತಿಲ್ಲ ಎಂಬ ಅಪನಂಬಿಕೆ ಜನರಲ್ಲಿ ಮೂಡುತ್ತದೆ. ಐತಿಹಾಸಿಕ ಹಾಗೂ ಸೊಗಸಾದ ರಚನೆಗಳನ್ನು ನೆಲಸಮ ಮಾಡುವಂತಹ ಸುಲಭ ಮಾರ್ಗ ಕಂಡುಕೊಂಡರೆ ಮೈಸೂರಿನ ಪರಂಪರೆ ಹಾಗೂ ಚರಿತ್ರೆಗೆ ಧಕ್ಕೆಯುಂಟಾಗುತ್ತದೆ. ಸಂಬಂಧಪಟ್ಟ ಇಲಾಖೆಯವರು ಪಾರಂಪರಿಕ ಕಟ್ಟಡಗಳ ಬಗ್ಗೆ ತೋರಿದ ಉದಾಸೀನ ಮನೋಭಾವ ಈಗಿನ ಸ್ಥಿತಿಗೆ ಕಾರಣವಾಗಿದೆ ಎಂದಿದ್ದಾರೆ.
ನಮ್ಮ ಪರಂಪರೆಯು ಮೈಸೂರಿನ ಜೀವನಾಧಾರವಾಗಿದ್ದು, ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ವಪ್ರಯತ್ನ ಮಾಡಬೇಕು. ಐತಿಹಾಸಿಕ ಕಟ್ಟಡಗಳ ಮರುಸ್ಥಾಪನೆಯನ್ನು ಸಮರ್ಥ, ತಜ್ಞ ಸಂಸ್ಥೆಗಳಿಗೆ ಒಪ್ಪಿಸಿ ಮುಂಬರುವ ಪೀಳಿಗೆಗಾಗಿ ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.