ಮೈಸೂರು: ಯುದ್ಧಪೀಡಿತ ಉಕ್ರೇನ್‌ನಲ್ಲಿದ್ದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಮೈಸೂರಿನ ಜೆಎಸ್‌ಎಸ್ ಸಂಸ್ಥೆಯು ಅವಕಾಶ ನೀಡಿರುವ ಬೆನ್ನಲ್ಲೇ ಅಲ್ಲಿನ ಸಾಕು ಪ್ರಾಣಿಗಳಿಗೂ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಶ್ರಯ ನೀಡಲು ಚಿಂತನೆ ನಡೆದಿದೆ.
ಯುದ್ಧಪೀಡಿತ ಉಕ್ರೇನ್‌ನಲ್ಲಿರುವ ಭಾರತೀಯ ವೈದ್ಯರೊಬ್ಬರು ಸಾಕಿದ ಜಾಗ್ವಾರ್, ಚಿರತೆ ಸೇರಿದಂತೆ ಇನ್ನಿತರೆ ಪ್ರಾಣಿಗಳನ್ನು ಮೈಸೂರಿನ ಮೃಗಾಲಯಕ್ಕೆ ತರಲಾಗುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ಭಾರತೀಯ ಮೃಗಾಲಯ ಪ್ರಾಧಿಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ.
ಉಕ್ರೇನ್‌ನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಆಂಧ್ರಪ್ರದೇಶದ ತನ್ಕೂರ್ ನಗರದ ಡಾ.ಗಿರಿ ಕುಮಾರ್ ಪಾಟೀಲ್ ಅವರು ಉಕ್ರೇನ್‌ನಲ್ಲಿ ಚಿರತೆ ಹಾಗೂ ಜಾಗ್ವರ್ ಸಾಕಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಜನ ಇವರನ್ನು 'ಜಾಗ್ವಾರ್ ಕುಮಾರ್' ಎಂದು ಕರೆಯುತ್ತಿದ್ದರು.
ಡಾ.ಗಿರಿ ಕುಮಾರ್ ಪಾಟೀಲ್ ಅವರಿಗೆ ವನ್ಯಪ್ರಾಣಿಗಳನ್ನು ಸಾಕುವ ಹವ್ಯಾಸವಿದೆ. ಹೀಗಾಗಿ ತಮ್ಮ ಮನೆಯಲ್ಲಿ ಜಾಗ್ವಾರ್, ಕಪ್ಪು ಚಿರತೆ, ಇಟಾಲಿಯನ್ ಮಾಸ್ಟಿಫ್ಸ್ ತಳಿಯ ಮೂರು ನಾಯಿಗಳನ್ನು ಸಾಕುತ್ತಿದ್ದರು. ರಷ್ಯಾ- ಉಕ್ರೇನ್ ಯುದ್ಧದ ಅವಧಿಯಲ್ಲಿ ತಮ್ಮ ಸಾಕು ಪ್ರಾಣಿಗಳಿಗಾಗಿ ಕಟ್ಟಡವನ್ನು ತೊರೆಯಲು ಮನಸ್ಸು ಮಾಡಲಿಲ್ಲ. ಆದ್ದರಿಂದ ಯುದ್ಧದ ಸಂದರ್ಭದಲ್ಲಿ ರಷ್ಯಾ ಸೈನಿಕರು ಕುಮಾರ್ ಅವರನ್ನು ಸೆರೆ ಹಿಡಿದು, ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು. ಅಲ್ಲದೇ ಭಾರತೀಯರು ಎನ್ನುವ ಕಾರಣಕ್ಕೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದರು.
ಡಾ.ಗಿರಿ ಕುಮಾರ್ ಪಾಟೀಲ್ ಅವರು ತಾಯಿನಾಡಿಗೆ ಮರಳುವ ಇಚ್ಛೆ ಹೊಂದಿದ್ದಾರೆ. ಆದರೆ, ತಾವು ಸಾಕಿರುವ ವನ್ಯ ಪ್ರಾಣಿಗಳನ್ನು ಬಿಟ್ಟು ಬರಲು ಸಿದ್ಧರಿಲ್ಲ. ಹಾಗಾಗಿ, ಭಾರತಕ್ಕೆ ವನ್ಯಪ್ರಾಣಿಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ಪೋಷಣೆಗಾಗಿ ತೆಲಂಗಾಣದಲ್ಲಿ 50 ಎಕರೆ ಜಾಗವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಭಾರತದಲ್ಲಿ ಯಾವುದೇ ವ್ಯಕ್ತಿಗಳು ವನ್ಯ ಪ್ರಾಣಿಗಳನ್ನು ಸಾಕಲು ಅವಕಾಶ ಇಲ್ಲ. ಅಲ್ಲದೇ, ಖಾಸಗಿಯಾಗಿ ಜಾಗ್ವಾರ್ ಹಾಗೂ ಚಿರತೆಯಂತಹ ಪ್ರಾಣಿಗಳನ್ನು ಸಾಕಲು ಅವಕಾಶ ಇಲ್ಲದ ಕಾರಣ ಸರ್ಕಾರ ಇವರ ಕೋರಿಕೆಯನ್ನು ತಿರಸ್ಕರಿಸಿದೆ. ಅವರ ಸಾಕು ಪ್ರಾಣಿಗಳನ್ನು ಅತ್ಯುತ್ತಮ ಮೃಗಾಲಯದಲ್ಲಿ ಸಾಕಲು ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದೆ.
ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯ ದೇಶದಲ್ಲಿ ಅತ್ಯುತ್ತಮ ಮೃಗಾಲಯ ಎಂಬ ಖ್ಯಾತಿಗಳಿಸಿದೆ. 157 ಎಕರೆ ವಿಸ್ತಾರ ಹೊಂದಿದ್ದು, 150 ವಿಧದ 1,450 ವನ್ಯಪ್ರಾಣಿಗಳಿವೆ. ಜಾಗ್ವಾರ್, ಚಿರತೆ, ಹುಲಿ ಸೇರಿದಂತೆ 25 ದೇಶಗಳ ಪ್ರಾಣಿಗಳಿವೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿ, 'ನನ್ನ ಪ್ರಾಣಿಗಳಿಗೆ ಸ್ಥಳ ಕೊಡಿ ಅಂತಾ ಭಾರತ ಸರ್ಕಾರಕ್ಕೆ ಉಕ್ರೇನ್‌ನಲ್ಲಿ ವಾಸವಾಗಿದ್ಧ ಡಾ. ಗಿರಿ ಕುಮಾರ್ ಪಾಟೀಲ್ ಕೇಳಿಕೊಂಡರು. ಅವರಿಗೆ ಭಾರತ ಸರ್ಕಾರ, ನಮ್ಮ ದೇಶದಲ್ಲಿ ವನ್ಯ ಪ್ರಾಣಿಗಳನ್ನು ಮನೆಯಲ್ಲಿ ಸಾಕುವ ಹಾಗಿಲ್ಲ. ನಮ್ಮಲ್ಲಿ ಅತ್ಯುತ್ತಮ ಮೃಗಾಲಯಗಳಿವೆ. ನೀವು ಸೂಚಿಸಿದ ಮೃಗಾಲಯಕ್ಕೆ ಸ್ಥಳಾಂತರ ಮಾಡ್ತೀವಿ ಅಂತ ಭರವಸೆ ನೀಡಿದೆ. ನಮ್ಮ ಮೃಗಾಲಯದಲ್ಲಿ ಅವರ ವನ್ಯ ಪ್ರಾಣಿಗಳನ್ನು ಪೋಷಣೆ ಮಾಡಲು ಸಿದ್ಧರಿದ್ದೇವೆ' ಎಂದು ಹೇಳಿದರು.
ಇದನ್ನೂ ಓದಿ: ತಾಯಿ ಕೊಂದ ಕೆಂಪು ಗೂಟದ ವಾಹನ; ಪ್ರತೀಕಾರಕ್ಕಾಗಿ ಹವಣಿಸುತ್ತಿದೆ ಈ ಶ್ವಾನ!