ಮೈಸೂರು: ನಾಡಹಬ್ಬ ದಸರಾಗೆ ಗಜಪಡೆ ಸಜ್ಜಾಗುತ್ತಿದೆ. ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ದಸರಾ ಆನೆಗಳಿಗೆ ಇಂದಿನಿಂದ ಭಾರ ಹೊರಿಸುವ ತಾಲೀಮು ಆರಂಭಿಸಲಾಯಿತು.
ಜಂಬೂ ಸವಾರಿಯ ದಿನ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಇಂದಿನಿಂದ ಭಾರ ಹೊರುವ ತಾಲೀಮು ಶುರುವಾಗಿದೆ. ಅದಕ್ಕೂ ಮುನ್ನ ಆನೆ ಶಿಬಿರಗಳ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಗಜಪಡೆಗೆ ಅರಣ್ಯಾಧಿಕಾರಿಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಡಿಸಿಎಫ್ ಕರಿಕಾಳನ್, ಸೆ. 13 ರಂದು ಗಜಪಯಣದ ಮೂಲಕ ಅರಣ್ಯ ಭವನಕ್ಕೆ ಬಂದ ಗಜಪಡೆಯನ್ನು ಸೆ.16 ರಂದು ಅರಮನೆಗೆ ಕರೆತರಲಾಯಿತು. ಇಲ್ಲಿಯವರೆಗೆ ಯಾವುದೇ ಭಾರ ಹಾಕಿ ವಾಕ್ ಮಾಡಿಸಿಲ್ಲ. ಇಂದು ಪೂಜೆ ಸಲ್ಲಿಸಿ ಭಾರ ಹೊರಿಸುವ ಕಾರ್ಯವನ್ನು ಆರಂಭಿಸಲಾಗಿದ್ದು, ಮರಳು ಮೂಟೆ, ನಮ್ದಾ ಗಾದಿ (ಗೋಣಿ ಚೀಲದಿಂದ ಮಾಡಿದ ಹಾಸಿಗೆ) ವಸ್ತುವನ್ನು ಹೊತ್ತು 500 ರಿಂದ 600 ಕೆಜಿ ತೂಕದ ಭಾರವನ್ನು ಆನೆಗೆ ಬೆನ್ನಮೇಲೆ ಹಾಕಿ ತಾಲೀಮು ನಡೆಸಲಾಗುವುದು.
ಇಂದು ಅಭಿಮನ್ಯುವಿಗೆ ಭಾರ ಹೊರುವ ತಾಲೀಮನ್ನು ಆರಂಭಿಸಲಾಗಿದ್ದು, ನಂತರ ಗೋಪಾಲಸ್ವಾಮಿ ಬಳಿಕ ಧನಂಜಯ ಆನೆಗೆ ಒಟ್ಟು ಮೂರು ಆನೆಗಳಿಗೆ ದಿನ ಬಿಟ್ಟು ದಿನ ಭಾರದ ತಾಲೀಮು ನಡೆಸಲಾಗುವುದು. ಹೊಸದಾಗಿ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿರುವ ಅಶ್ವತ್ಥಾಮ ಆನೆಗೆ 100, 200 ಕೆಜಿ ಭಾರದ ಮೂಟೆ ಕಟ್ಟಿ ತಾಲೀಮು ನಡೆಸಲಾಗುವುದು ಎಂದು ತಿಳಿಸಿದರು.
ಇದರ ಜೊತೆಗೆ ಅರಮನೆಯ ಹೊರಗಡೆ ಆನೆಗಳನ್ನು ತಾಲೀಮು ನಡೆಸಿದರೆ ಒಳ್ಳೆಯದು ಎಂಬ ಚಿಂತನೆ ಇದೆ. ಇದರ ಬಗ್ಗೆ ದಸರಾದ ಕಾರ್ಯಕಾರಿ ಸಮಿತಿ ಮುಂದೆ ವಿಚಾರ ಇಡುತ್ತೇವೆ. ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಪ್ರತಿದಿನ ಆನೆಗಳಿಗೆ 5 ರಿಂದ 6 ಕಿ.ಮೀ ವಾಕ್ ಮಾಡಿಸಿದರೆ ಒಳ್ಳೆಯದು. ಜತೆಗೆ ಅರಮನೆಯ ಹೊರಗಡೆ ವಾಕ್ ಮಾಡಿಸಿದರೆ ಜನರನ್ನು ನೋಡಿ ಗಾಬರಿಯಾಗುವುದು ತಪ್ಪುತ್ತದೆ ಎಂದು ಡಿಸಿಎಫ್ ತಿಳಿಸಿದರು.
ರಾಜಮನೆತನದ ಆನೆಗಳ ವರ್ಗಾವಣೆಗೆ ಸೂಚನೆ ಬಂದಿದೆ:
ರಾಜಮನೆತನಕ್ಕೆ ಸೇರಿದ 6 ಹೆಣ್ಣು ಆನೆಗಳಿದ್ದು, ಈ ಆನೆಗಳಲ್ಲಿ ಸೀತಾ, ರೂಬಿ, ಜಮಿನಿ ಹಾಗೂ ರಾಜೇಶ್ವರಿ ಆನೆಗಳನ್ನು ವರ್ಗಾವಣೆ ಮಾಡಲು ಸೂಚನೆ ಬಂದಿದೆ. ಅಧಿಕೃತವಾಗಿ ಆದೇಶ ಪತ್ರ ಕೈ ಸೇರಿಲ್ಲ. ಆದೇಶ ಪ್ರತಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.
ಇದನ್ನೂ ಓದಿ: ದಸರಾಕ್ಕೆ ಸಿದ್ಧತೆ: ತಾಲೀಮು ಆರಂಭಿಸಿದ ಅಭಿಮನ್ಯು ನೇತೃತ್ವದ ಗಜಪಡೆ