ಮೈಸೂರು: ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಫಾಯಿ ಮಿತ್ರರಿಗೆ ಉತ್ತಮ ಸಮವಸ್ತ್ರ ವಿನ್ಯಾಸಗೊಳಿಸಲು ನಗರ ಪಾಲಿಕೆ ಮುಂದಾಗಿದ್ದು, ಈ ಕುರಿತು ಸಮವಸ್ತ್ರ ವಿನ್ಯಾಸಕ್ಕೆ ಪ್ರಸ್ತಾವನೆ ಆಹ್ವಾನಿಸಿದೆ.
ಈಗಾಗಲೇ ಸಮವಸ್ತ್ರ ವಿನ್ಯಾಸಕ್ಕೆ ಪ್ರಸ್ತಾವನೆ ಆಹ್ವಾನಿಸಲಾಗಿದ್ದು, ವಿನ್ಯಾಸ ಮಾಡಿಕೊಟ್ಟು ಅದು ಆಯ್ಕೆಯಾದರೆ 10,000 ರೂ. ನಗದು ಬಹುಮಾನ ನೀಡಲಾಗುತ್ತಿದೆ. ಸಮವಸ್ತ್ರ ವಿನ್ಯಾಸಗೊಳಿಸುವವರು ವಸ್ತ್ರ ವಿನ್ಯಾಸಕರೇ ಆಗಿರಬೇಕೆಂದಿಲ್ಲ, ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ.
ಸಮವಸ್ತ್ರದ ವಿನ್ಯಾಸ ಹೀಗಿರಬೇಕು :
ಸಮವಸ್ತ್ರವು ಸಫಾಯಿ ಮಿತ್ರರಿಗೆ ಆರಾಮದಾಯಕವಾಗಿರಬೇಕು, ಸಮವಸ್ತ್ರದ ಮೇಲೆ ಸಫಾಯಿ ಮಿತ್ರರ ಚಾಲೆಂಜ್, ಸ್ವಚ್ಛ ಭಾರತ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಲಾಂಛನ ಇರಬೇಕು. ಜೊತೆಗೆ ಸುರಕ್ಷತಾ ಸಾಮಗ್ರಿಗಳು ಹಾಗೂ ಟೂಲ್ಸ್ ಇರಿಸಿಕೊಳ್ಳಲು ಜೇಬುಗಳಿರಬೇಕು. ಅತ್ಯಾಕರ್ಷಕ ಮತ್ತು ಸೃಜನಾತ್ಮಕವಾದ ವಿನ್ಯಾಸವನ್ನು ಪರಿಗಣಿಸಿ ಪಾಲಿಕೆ ಬಹುಮಾನ ನೀಡುತ್ತದೆ. ವಿನ್ಯಾಸಗಳನ್ನು ತಮ್ಮ ಹೆಸರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಯೊಂದಿಗೆ ಪಾಲಿಕೆ ನೀಡಿರುವ ವೆಬ್ ಸೈಟ್ ಅಥವಾ ಮೇಲ್ ಗೆ ಕಳುಹಿಸಬಹುದಾಗಿದೆ.