ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಮೈಸೂರು ಕೇಂದ್ರ ಕಾರಾಗೃಹದಿಂದ 20 ಕೈದಿಗಳನ್ನು ಸೇರಿ ರಾಜ್ಯದಲ್ಲಿ 81 ಅಲ್ಪಾವಧಿ ಶಿಕ್ಷಾ ಬಂಧಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ.
ಮೈಸೂರು ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಾದ ಕೆ.ಸಿ ದಿವ್ಯಶ್ರೀ ಮಾತನಾಡಿ, ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ರಾಜ್ಯ ಸರ್ಕಾರದ ಸೂಚನೆಯಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಒಟ್ಟು 3 ಹಂತಗಳಲ್ಲಿ ಅಲ್ಪಾವಧಿ ಶಿಕ್ಷಾ ಬಂಧಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಕಾರಾಗೃಹ ಹಾಗೂ ರಾಜ್ಯ ಸರ್ಕಾರದ ಹಂತದಲ್ಲಿ ಸಮಿತಿ ರಚಿಸಿ, ಎಲ್ಲ ಹಂತದ ಪ್ರಕರಣಗಳನ್ನು ಪರಿಶೀಲಿಸಿ, ರಾಜ್ಯಪಾಲರ ಅನುಮತಿಯ ಮೇರೆಗೆ ಇಂದು ಮೊದಲನೇ ಹಂತದಲ್ಲಿ ಮೈಸೂರು ಕೇಂದ್ರ ಕಾರಾಗೃಹದಿಂದ 20 ಜನರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
2ನೇ ಹಂತದ ಬಿಡುಗಡೆಯನ್ನು ಮುಂದಿನ ವರ್ಷ ಜನವರಿ 26 ರಂದು ಮತ್ತು ಮೂರನೇ ಹಾಗೂ ಕೊನೆಯ ಹಂತದ ಬಿಡುಗಡೆಯನ್ನು ಮುಂದಿನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಈ ಎಲ್ಲ ಪ್ರಕ್ರಿಯೆಗಳಲ್ಲಿರುವ ಮುಖ್ಯ ಉದ್ದೇಶ ಕಾರಾಗೃಹದಲ್ಲಿರುವ ಬಂಧಿ ನಿವಾಸಿಗಳ ಸಂಖ್ಯೆ ಕಡಿಮೆ ಮಾಡುವುದು ಮತ್ತು ಅವರಿಗೆ ಬದುಕಲು ಮತ್ತೊಂದು ಅವಕಾಶ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡುವುದಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: You are a Bomber.. ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಯುವತಿಯ ಮೆಸೇಜ್