ಮೈಸೂರು: ಸರ್ಕಾರಿ ಶಾಲೆಯಲ್ಲಿ ಓದಿದ ದಿನಗೂಲಿ ಕಾರ್ಮಿಕರ ಮಗಳು ತನ್ನ ಪರಿಶ್ರಮದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 616 ಅಂಕ ಪಡೆಯುವ ಮೂಲಕ ಮೈಸೂರು ಜಿಲ್ಲೆಗೆ ಈ ಬಾರಿ ಟಾಪರ್ ಆಗಿದ್ದಾಳೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದ ಸತೀಶ್ ಮತ್ತು ಜ್ಯೋತಿ ದಂಪತಿಯ ಪುತ್ರಿ ಮಹಿಮಾ ಈ ಸಾಧನೆ ಮಾಡಿದ್ದಾಳೆ. ಆದರ್ಶ ಸರ್ಕಾರಿ ಶಾಲೆಯಲ್ಲಿ ಇವಳು ಓದುತ್ತಿದ್ದಳು.
’’ಕೊರೊನಾ ಕಾರಣದಿಂದ ಪರೀಕ್ಷೆಯನ್ನು ಮುಂದೂಡಿದ್ದ ಅವಧಿ ಸದ್ಬಳಕೆ ಮಾಡಿಕೊಂಡೆ. ಅಲ್ಲದೇ, ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕೊರೊನಾ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನನ್ನ ತಂದೆ-ತಾಯಿ, ಶಿಕ್ಷಕರ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ’’ ಎಂದು ಸಂತಸ ಬಾಲಕಿ ಮಹಿಮಾ ಸಂತಸ ವ್ಯಕ್ತಪಡಿಸಿದ್ದಾಳೆ. ಮಹಿಮಾ, ಮುಂದೆ ಐಐಟಿ ಮಾಡಿ ದೊಡ್ಡ ಹುದ್ದೆಗೆ ಸೇರಬೇಕು ಎಂದುಕೊಂಡಿದ್ದೇನೆ ಎಂದೂ ಇದೇ ಸಂದರ್ಭದಲ್ಲಿ ತನ್ನ ಮನದಿಂಗಿತ ಹೇಳಿಕೊಂಡಳು.
ಮಹಿಮಾ ತಂದೆ ಕಲ್ಲು ಗಣಿಗಾರಿಕೆ ಕ್ರಷರ್ನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಸಾಧನೆ ಕೇಳಿ ತುಂಬಾ ಸಂತೋಷವಾಯಿತು. ಮುಂದೆ ಅವಳು ಇಷ್ಟಪಟ್ಟಂತೆ ಓದಲಿ ಎಂದು ಸುರೇಶ ತಮ್ಮ ಮನದಾಸೆ ಹೊರಹಾಕಿದರು.
’’ಬಾಲಕಿ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದಳು. ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದಳು. ನಮ್ಮ ಶಾಲೆಗೆ ಹೆಸರು ತಂದುಕೊಟ್ಟಿರುವ ಮಹಿಮಾಗೆ ಅಭಿನಂದನೆಗಳು. ಹೀಗೆ ಚೆನ್ನಾಗಿ ಓದಲಿ ಎಂಬುದೇ ನಮ್ಮ ಆಸೆ’’ ಎಂದು ಗಣಿತ ಶಿಕ್ಷಕ ನಂದೀಶ್ ಇದೇ ವೇಳೆ ಸಂತಸ ವ್ಯಕ್ತಪಡಿಸಿದರು.