ಮೈಸೂರು: ಕೃಷಿಯಲ್ಲಿ ಯುವಕರು ಉದ್ಯಮಿಗಳಾಗಲು ಸಾಧ್ಯ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು. ಮೈಸೂರಿನ ಸಿಎಫ್ಟಿಆರ್ಐ ನಲ್ಲಿ ನಡೆಯುತ್ತಿರುವ 'ಟೆಕ್ ಭಾರತ್' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿದ್ಧಪಡಿಸಿರುವ ವಿವಿಧ ಆಹಾರ ಪೊಟ್ಟಣಗಳನ್ನು ಅವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಯುವಕರು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿಬಹುದು. ಐಟಿ ಬಿಟಿ ಕಂಪನಿಗಳಿಗಿಂತ ಉತ್ತಮ ಸೇವೆ ಸಲ್ಲಿಸಿ ಕೃಷಿ ಮತ್ತು ಆಹಾರ ಪದಾರ್ಥಗಳನ್ನು ವಿದೇಶಕ್ಕೂ ರಫ್ತು ಮಾಡಬಹುದು. ಆಹಾರ ಉತ್ಪಾದನೆ ಹೆಚ್ಚಿಸಲು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ತಂತ್ರಜ್ಞಾನದಿಂದ ಕೃಷಿ ಕ್ಷೇತ್ರ ಬದಲಾಗುತ್ತಿದೆ. ಕೃಷಿ ಕಡೆ ಮುಖ ಮಾಡಿದರೆ, ಹೆಚ್ಚಾಗಿ ಕೃಷಿ ಬೆಳೆಗಳನ್ನು ಬೆಳೆಯುತ್ತಿರುವ ದೇಶದ ಜೊತೆ ನಾವು ಸ್ಪರ್ಧೆ ಮಾಡಬಹುದು ಎಂದರು.
ಹೈನುಗಾರಿಕೆಯಿಂದ ಬರುವ ಹಾಲಿನಿಂದ ಹಲವಾರು ಪದಾರ್ಥಗಳನ್ನು ತಯಾರಿಸಿ ಇತರ ದೇಶಗಳಿಗೂ ರಫ್ತು ಮಾಡಿ ಹೆಚ್ಚಿನ ಆರ್ಥಿಕ ಕ್ರೋಡೀಕರಣ ಸಾಧಿಸಬಹುದು. ಕೃಷಿಯಲ್ಲಿ ಹೆಚ್ಚು ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು, ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯ. ಯುವಕರು ಹಾಗೂ ವಿಜ್ಞಾನ ಪರಿಣಿತರು ಇದರತ್ತ ಒಲವು ತೋರಿದರೆ ದೇಶದ ಅಭಿವೃದ್ಧಿಯ ಜತೆಗೆ ನಿರುದ್ಯೋಗ ಸಮಸ್ಯೆ ನೀಗಲಿದೆ ಎಂದು ತಿಳಿಸಿದರು.
ಹೊಸ ತಂತ್ರಜ್ಞಾನಗಳ ಪ್ರದರ್ಶನ: ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI)ಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಕೃಷಿ ಮತ್ತು ಆಹಾರ ತಂತ್ರಜ್ಞಾನ ಮೇಳ ಹಾಗೂ ವಸ್ತು ಪ್ರದರ್ಶನದಲ್ಲಿ ಹೊಸ ತಂತ್ರಜ್ಞಾನಗಳನ್ನ ಪ್ರದರ್ಶನ ಮಾಡಲಾಗಿದೆ. ಇದರಲ್ಲಿ ಸಿಎಫ್ಟಿಆರ್ಐ ಅಭಿವೃದ್ಧಿ ಪಡಿಸಿದ ಏಳು ಹೊಸ ತಂತ್ರಜ್ಞಾನಗಳು ಸಹ ಇವೆ.
ನಗರದ ಸಿಎಫ್ಟಿಆರ್ಐನಲ್ಲಿ ಗುರುವಾರ(ಮೇ19)ರಿಂದ ಆರಂಭವಾಗಿರುವ ಟೆಕ್ ಭಾರತ್-2022 ಮೂರನೇ ಆವೃತ್ತಿಯ ಮೇಳದಲ್ಲಿ ಅಗ್ರಿ ಟೆಕ್, ಫುಡ್ ಟೆಕ್ ಮತ್ತು ಫುಡ್ ಪ್ರೊಸೆಸಿಂಗ್ ಟೆಕ್ನಾಲಜಿ ಕುರಿತು ವಿವಿಧ ಗೋಷ್ಠಿಗಳು ನಡೆಯಲಿದೆ. ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳ ಸಂಶೋಧಕರು, ತಂತ್ರಜ್ಞರು, ಪ್ರಗತಿಪರ ರೈತರು, ಆಹಾರ ಉತ್ಪಾದನಾ ಕ್ಷೇತ್ರದ ಉದ್ಯಮಿಗಳು ಆಗಮಿಸಿದ್ದಾರೆ.
ಸಿಎಫ್ಟಿಆರ್ಐನ ಆವರಣದಲ್ಲಿ ಏರ್ಪಡಿಸಿರುವ ವಸ್ತು ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳ ಕೈಗಾರಿಕೆಗಳು, ತಂತ್ರಜ್ಞಾನ ಅಭಿವೃದ್ಧಿ ಕಂಪನಿಗಳು ಹಾಗೂ ಉದ್ಯಮಕ್ಕೆ ಸಂಬಂಧಿಸಿದ 100ಕ್ಕೂ ಹೆಚ್ಚು ಮಳಿಗೆಗಳನ್ನ ತೆರೆಯಲಾಗಿದೆ. ಇಲ್ಲಿ ಕೃಷಿ ಮತ್ತು ಆಹಾರ ತಂತ್ರಜ್ಞಾನ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಇದರಲ್ಲಿ ಸಿಎಫ್ಟಿಆರ್ಐ ಅಭಿವೃದ್ಧಿಪಡಿಸಿರುವ ರಾಗಿ ಬ್ರೆಡ್ ತಯಾರಿಕೆ ವಿಧಾನ ಸೇರಿದಂತೆ 22 ತಂತ್ರಜ್ಞಾನಗಳನ್ನ ಜನರ ಅನುಕೂಲಕ್ಕಾಗಿ ಉಚಿತವಾಗಿ ನೀಡುತ್ತಿದೆ. ಇದರ ಬಗ್ಗೆ ಪುಸ್ತಕವನ್ನು ಸಹ ಬಿಡುಗಡೆ ಮಾಡಿದ್ದು, ಈ ತಂತ್ರಜ್ಞಾನಗಳನ್ನ ಉಚಿತವಾಗಿ ಸಾರ್ವಜನಿಕರು ಸಿಎಫ್ಟಿಆರ್ಐ ವೆಬ್ ಸೈಟ್ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ಉಚಿತವಾಗಿ ಲಭ್ಯವಿರುವ ತಂತ್ರಜ್ಞಾನಗಳು: CFTRI ಈಗಾಗಲೇ 15 ತಂತ್ರಜ್ಞಾನಗಳನ್ನ ಉಚಿತವಾಗಿ ನೀಡಿದ್ದು, ಈಗ ಮತ್ತೆ 7 ಹೊಸ ತಂತ್ರಜ್ಞಾನಗಳನ್ನ ನೀಡುತ್ತಿದೆ. ಅವುಗಳ ತಂತ್ರಜ್ಞಾನ ಪುಸ್ತಕ ರೂಪದಲ್ಲಿ ಹಾಗೂ ಸಿಎಫ್ಟಿಆರ್ಐ ವೆಬ್ ಸೈಟ್ ನಲ್ಲಿ ಉಚಿತವಾಗಿ ಲಭ್ಯವಿದೆ. ಅವುಗಳೆಂದರೆ
- ಆಮ್ಲಾ ಕ್ಯಾಂಡಿ
- ಸೀರಿಯಲ್ ಫ್ಲೆಕ್ಸ್
- ರೈಸ್
- ಚಿಕನ್ ಸೂಪ್ ಮಿಕ್ಸ್
- ಕ್ಯೂರಿಂಗ್ ಆಫ್ ನ್ಯೂ ಪ್ಯಾಡಿ
- ಫ್ರೂಟ್ ಸ್ಟ್ರೆಡ್
- ಜಿಂಜರ್ ಡಿಹೈಡ್ರೆಷನ್
- ಗ್ರೀನ್ ಚಿಲ್ಲಿ ಸಾಸ್
- ಪಾರ್ ಬಾಯ್ಲಿಂಗ್ ಆಫ್ ಪ್ಯಾಡಿ
- ಪ್ರೋಟೀನ್ ಬನ್ಸ್
- ರೆಡಿ ಮಿಕ್ಸ್ ಇಡ್ಲಿ
- ರೆಡಿಮಿಕ್ಸ್ ಸಾಂಬಾರ್
- ರೀಟೇಲ್ ಪ್ಯಾಕ್ ಗಳಲ್ಲಿ ದೋಸೆ
- ರೀಫೈನ್ಡ್ ಮಿಲ್ಲೆಟ್ ಫ್ಲೋರ್
- ರೈಸ್ ಮಿಲ್ಕ್ ಮಿಕ್ಸ್
- ಟರ್ಮರಿಕ್ ಕ್ಯೂರಿಂಗ್
- ಲೀಫ್ ಕಫ್ ಮಷಿನ್
- ಹ್ಯಾಂಡ್ ಆಪರೇಟಿವ್ ಪಾಪಡ್ ಪ್ರೆಸ್
- ಪೆಡಲ್ ಆಪರೇಟಿವ್ ಮಿಲ್ಲೆಟ್ ಡೇಹುಲ್ಲರ್ ತಂತ್ರಜ್ಞಾನಗಳನ್ನ ಸಂಸ್ಥೆಯು ಉಚಿತವಾಗಿ ನೀಡುತ್ತಿದೆ.
ಇದನ್ನೂ ಓದಿ: ಸಿಎಫ್ಟಿಆರ್ಐನಲ್ಲಿ ಮೂರು ದಿನ ಟೆಕ್ ಭಾರತ್ ಸೆಮಿನಾರ್