ಮೈಸೂರು: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ ತಾಂತ್ರಿಕ ದೋಷ ಉಂಟಾದ ಕಾರಣ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ರೈತರು ಮಂಗಳವಾರ ರಾತ್ರಿ ತೊಂದರೆ ಅನುಭವಿಸಿದರು.
ಬೆಟ್ಟದಪುರ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಸರ್ಕಾರ ಎರಡನೇ ಬಾರಿಗೆ ರಾಗಿ ಖರೀದಿಸಲು ರೈತರಿಂದ ನೋಂದಣಿ ಪ್ರಕ್ರಿಯೆಯನ್ನು ಸೋಮವಾರದಿಂದ ಶುರು ಮಾಡಿದೆ. ಆದರೆ ಸೋಮವಾರದಿಂದಲೂ ತಾಂತ್ರಿಕ ದೋಷ ಎದುರಾಗಿದ್ದು ಹೆಚ್ಚಿನ ಸಂಖ್ಯೆಯ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲೇ ಕಾದು ಕುಳಿತಿದ್ದಾರೆ. ಮಂಗಳವಾರವೂ ಇದೇ ಸಮಸ್ಯೆ ಎದುರಾಗಿದ್ದು, ರಾತ್ರಿ 9 ಗಂಟೆಗೆ ಸಮಸ್ಯೆ ಸರಿಯಾಗಬಹುದು ಎಂದು ರೈತರು ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಇದನ್ನೂ ಓದಿ: 4ನೇ ಅಲೆ ಭೀತಿ: ಮೈಸೂರಿನಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳ
ತಾಂತ್ರಿಕ ಸಮಸ್ಯೆ ಕಾರಣದಿಂದ ಆನ್‌ಲೈನ್ ನೋಂದಣಿ ಲಾಕ್ ಓಪನ್ ಆಗದ ಕಾರಣ, ರೈತರು ಹಿಂತಿರುಗಿ ಹೋಗಿ ಅಸಮಾಧಾನ ಹೊರಹಾಕಿದರು. ರಾತ್ರಿ 1ಗಂಟೆಯವರೆಗೂ ರೈತರು ಎಪಿಎಂಸಿ ಆವರಣದಲ್ಲೇ ಇದ್ದರು. ಸರ್ಕಾರ ರಾಗಿ ಖರೀದಿಗೆ ಡೆಡ್‌ಲೈನ್ ನೀಡಿರುವುದೇ ನೂಕುನುಗ್ಗಲು ನಡೆಯಲು ಕಾರಣ. ಜೊತೆಗೆ, ಸಣ್ಣ ಹಿಡುವಳಿದಾರರಿಗೆ ನಿಯಮಗಳನ್ನು ವಿಧಿಸಿರುವ ಕಾರಣ ಸಮಸ್ಯೆ ತಲೆದೋರಿದೆ ಎಂದು ರೈತರು ಅಳಲು ತೋಡಿಕೊಂಡರು.