ಮೈಸೂರು: ಹಳೇ ವೈಷಮ್ಯದ ಹಿನ್ನೆಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಪುಂಡರ ಗುಂಪೊಂದು ನಗರ ಪಾಲಿಕೆ ಸದಸ್ಯ ಅಯಾಜ್ ಪಾಷ (ಪಂಡು) ಅವರ ಅಳಿಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೈ ಕತ್ತರಿಸಿ ಪರಾರಿಯಾಗಿದೆ.
ಅಯಾಜ್ ಪಾಷ ಅವರ ಅಳಿಯ ಶಾಂತಿನಗರದ ಶಬಾಜ್ (30) ಹಲ್ಲೆಗೆ ಒಳಗಾದವರು. ಉದಯಗಿರಿ ನಿವಾಸಿಗಳಾದ ಸಾಹಿಲ್, ಕಲೀಂ, ಫರಾಜ್ , ಅಸನೈನ್, ಅಬೀಬ್ ಹಲ್ಲೆ ನಡೆಸಿ ಪರಾರಿಯಾದವರು ಎನ್ನಲಾಗಿದೆ.
ಮೂರು ತಿಂಗಳ ಹಿಂದೆ ಜಿಲ್ಲಾ ನ್ಯಾಯಾಲಯದ ಬಳಿ ಆರೋಪಿ ಅಸನೈನ್ ಮತ್ತು ಶಬಾಜ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಶಬಾಜ್ನು ಅಸನೈನ್ಗೆ ಹೊಡೆದಿದ್ದನಂತೆ. ಇದೇ ದ್ವೇಷವನ್ನಿಟ್ಟುಕೊಂಡು ಸರಿಯಾದ ಸಮಯ ಕಾಯುತ್ತಿದ್ದ ಅಸನೈನ್ ಮತ್ತು ಸ್ನೇಹಿತರು, ಅಲ್ ಬದರ್ ಮಸೀದಿ ಬಳಿ ಶಬಾಜ್ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಲ್ಲದೇ ಆತನ ಎಡಕೈ ಕತ್ತರಿಸಿದ್ದಾರೆ.
ಶಬಾಜ್ ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಪೊಲೀಸರು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸತೀಶ್ ಹಾಗೂ ಅಭಿಷೇಕ್ ಎಂಬ ಇಬ್ಬರು ಯುವಕರ ಕೊಲೆಯಾದ ಕೆಲವೇ ದಿನಗಳಲ್ಲಿ ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ.