ಮೈಸೂರು: ಜೂನ್ 13ರಂದು ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಅವಧಿಯನ್ನು ಒಂದು ಗಂಟೆ ವಿಸ್ತರಣೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಜಿ ಸಿ ಪ್ರಕಾಶ್ ಮಾಹಿತಿ ನೀಡಿದರು. ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಜೂನ್ 13 ರಂದು ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಮತದಾನ ಅವಧಿಯನ್ನು 1 ಗಂಟೆ ಕಾಲ ವಿಸ್ತರಣೆ ಮಾಡಲಾದೆ ಎಂದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 1,41,961 ಮಂದಿ ಪದವೀಧರ ಮತದಾರರಿದ್ದಾರೆ. ಈ ಪೈಕಿ 82,505 ಪುರುಷರು 59,432 ಮಹಿಳೆಯರು ಹಾಗೂ 24 ಇತರೆ ಮತದಾರರಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತವನ್ನು ಚಲಾಯಿಸಲು ಅವಕಾಶವಿದ್ದು, ಮತದಾನ ಮಾಡಲು ಒಂದು ಗಂಟೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಮಾಹಿತಿ ನೀಡಿದರು.
ಅರ್ಹ ಮತದಾರರು ರಾಜ್ಯದ ಯಾವುದೇ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಕೂಡ, ಮತದಾನ ಮಾಡಲು ಅನುಕೂಲವಾಗುವಂತೆ ರಜೆ ನೀಡಲು ಆದೇಶಿಸಲಾಗಿದೆ. ಬಹಿರಂಗ ಪ್ರಚಾರ ಇಂದು ಸಂಜೆ 5 ಗಂಟೆಗೆ ಅಂತ್ಯವಾಗಲಿದೆ. ಮೈಸೂರು, ಮಂಡ್ಯ ಚಾಮರಾಜನಗರ, ಹಾಸನ ಸೇರಿದಂತೆ 4 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 150 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಕಾಶ್ ತಿಳಿಸಿದರು.
ಜಿಲ್ಲಾವಾರು ಮತಗಟ್ಟೆಗಳು: ಹಾಸನ ಜಿಲ್ಲೆಯಲ್ಲಿ 27 ಮತಗಟ್ಟೆಗಳು, ಮಂಡ್ಯದಲ್ಲಿ 45 ಮೈಸೂರು ಜಿಲ್ಲೆಯಲ್ಲಿ 66,ಚಾಮರಾಜನಗರ ಜಿಲ್ಲೆಯಲ್ಲಿ 12 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಪೈಕಿ ನಾಲ್ಕು ಜಿಲ್ಲೆಗಳಲ್ಲಿ 68 ಸೂಕ್ಷ್ಮ, 17 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಹಾಸನ ಜಿಲ್ಲೆಯಲ್ಲಿ 2 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಮಂಡ್ಯ ಜಿಲ್ಲೆಯಲ್ಲಿ 13, ಮೈಸೂರು ಜಿಲ್ಲೆಯಲ್ಲಿ 2 ಅತಿಸೂಕ್ಷ್ಮ ಮತಗಟ್ಟೆಗಳಿದ್ದು, ಅಲ್ಲೆಲ್ಲ ಹೆಚ್ಚಿನ ಬಂದೋಬಸ್ತ್ ಮಾಡಲಾಗುತ್ತದೆ.
ಮತದಾರರ ಬಲಗೈನ ತೋರುಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ. ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ, ಕ್ಷೇತ್ರದ ವ್ಯಾಪ್ತಿಗೆ ಸೇರದ ರಾಜಕೀಯ ನಾಯಕರು ಕ್ಷೇತ್ರದಿಂದ ಹೊರಡಬೇಕು. ಆಯಾ ತಾಲೂಕಿನ ಕೇಂದ್ರಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ನಡೆಯಲಿದ್ದು, ಜೂನ್ 15ರಂದು ಮೈಸೂರಿನ ಮಹಾರಾಣಿ ವಾಣಿಜ್ಯ ಪದವಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಚುನಾವಣಾ ಕಣದಲ್ಲಿ ಗಾಂಜಾ ಘಾಟು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಕಣ ರಂಗೇರಿರುವ ಮಧ್ಯೆ ಭಾರಿ ಪ್ರಮಾಣದ ನೀತಿಸಂಹಿತೆ ಉಲ್ಲಂಘನೆಯಾಗಿದೆ. ಹಾಸನ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಗಾಂಜಾ ಪತ್ತೆಯಾಗಿದೆ. ಪ್ರಜ್ಞಾವಂತ ಮತದಾರರು ಎನ್ನುವ ಚುನಾವಣಾ ಕ್ಷೇತ್ರದಲ್ಲಿ ಗಾಂಜಾ ಹಾಗೂ ಮದ್ಯದ ಅಮಲು ಕಂಡುಬಂದಿದೆ. ಈ ಸಂಬಂಧ ಚುನಾವಣಾ ಆಯೋಗವು ಒಟ್ಟು 21 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದೆ.
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಧಿಕಾರಿಗಳು ಗಾಂಜಾವನ್ನು ವಶಪಡಿಸಿಕೊಂಡಿದ್ದು, 4 ಜಿಲ್ಲೆಗಳಲ್ಲಿ ಒಟ್ಟು 516 ಪ್ರಕರಣಗಳಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಹಾಗೆಯೇ 2.34.824 ರೂ ಮೌಲ್ಯದ ಮದ್ಯ, 12 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ ಪ್ರಕಾಶ್ ಮಾಹಿತಿ ನೀಡಿದರು.
ಓದಿ: ನಮಗೆ ಗೆಲ್ಲೋಕಾಗಲ್ಲ ಅಂತ ಗೊತ್ತಿತ್ತು, ಆದ್ರೂ ಮನಸಾಕ್ಷಿ ವೋಟ್ ಹಾಕ್ತಾರೆಂದುಕೊಂಡಿದ್ದೆವು: ಸಿದ್ದರಾಮಯ್ಯ