ಮೈಸೂರು: ಕೋವಿಡ್-19 ಸಾಂಕ್ರಾಮಿಕದ ಅನೇಕ ಸವಾಲುಗಳ ಹೊರತಾಗಿಯೂ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು 2021- 22 ರಲ್ಲಿ 688.18 ಕೋಟಿಗಳ ರೂ. ಅತ್ಯಧಿಕ ಸರಕು ಸಾಗಣೆ ಆದಾಯವನ್ನು ದಾಖಲಿಸಿದೆ. ಇದು ಕಳೆದ ವರ್ಷಕ್ಕಿಂತಲೂ ಶೇ.54.58 ರಷ್ಟು ಮತ್ತು ವಿಭಾಗಕ್ಕೆ ನಿಗದಿಪಡಿಸಿದ ಗುರಿಗಿಂತ ಶೇ.22.60 ರಷ್ಟು ಹೆಚ್ಚಿನ ಸಾಧನೆ ಇದಾಗಿದೆ.
ಸರಕಿನ ಪ್ರಮಾಣವೂ ಸಹ 9.09 ದಶಲಕ್ಷ ಟನ್‌ಗಳಷ್ಟಾಗಿದ್ದು, ಕಳೆದ ವರ್ಷಕ್ಕಿಂತ ಶೇ.32.24 ಏರಿಕೆಯಾಗಿದೆ. ಕೇವಲ ಕಬ್ಬಿಣದ ಅದಿರಿನ ಸಾಗಣೆಯಿಂದಲೇ 503 ಕೋಟಿ ರೂ.ಗಳಷ್ಟು ಆದಾಯ ಬಂದಿದೆ. ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕದ ನಿರಂತರ ಮಾರುಕಟ್ಟೆ ತಂತ್ರದ ಬೆಂಬಲದೊಂದಿಗೆ 123 ರೇಕ್‌ಗಳಷ್ಟು ಮೆಕ್ಕೆಜೋಳ ಬೆಳೆಯನ್ನು ಸಾಗಿಸಿ 32.50 ಕೋಟಿ ರೂ. ಆದಾಯ ಸಂಪಾದಿಸಿದೆ.
ಪ್ರಸಕ್ತ ವರ್ಷದಲ್ಲಿ ಟಿವಿಎಸ್ ಸಮೂಹದ 22,500 ದ್ವಿಚಕ್ರ ವಾಹನಗಳನ್ನು ಒಳಗೊಂಡ 20.5 ರೇಕ್‌ಗಳನ್ನು ನಂಜನಗೂಡು ಟೌನ್ ರೈಲು ನಿಲ್ದಾಣದಿಂದ ದೇಶದ ಉತ್ತರ ಮತ್ತು ಈಶಾನ್ಯ ಭಾಗಗಳಿಗೆ ಕಳುಹಿಸಿ 4 ಕೋಟಿ ಆದಾಯ ಗಳಿಸಿದೆ. ಮೈಸೂರು ವಿಭಾಗದಿಂದ ಲೋಡ್ ಮಾಡಲಾದ ಸರಕುಗಳಲ್ಲಿ ಕಬ್ಬಿಣದ ಅದಿರು, ತೈಲೋತ್ಪನ್ನಗಳು, ಆಹಾರ ಧಾನ್ಯಗಳು, ಸಕ್ಕರೆ, ಸಿಮೆಂಟ್, ನಿಲುಭಾರ ಮತ್ತು ಇತರ ಸರಕುಗಳು ಸೇರಿವೆ.
ಪಾರ್ಸೆಲ್ ವಿಭಾಗದಲ್ಲೂ ಆದಾಯ: ಪಾರ್ಸೆಲ್ ವಿಭಾಗದಲ್ಲಿಯೂ, 9.60 ಕೋಟಿ ರೂ. ಅತ್ಯಧಿಕ ಆದಾಯವನ್ನು ಗಳಿಸಿದೆ. 2020-21ರಲ್ಲಿ ದಾಖಲಾದ 8,534 ಟನ್‌ಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಒಟ್ಟು 17,475 ಟನ್‌ಗಳ ಪಾರ್ಸೆಲ್‌ಗಳನ್ನು ಸಾಗಿಸುವ ಮೂಲಕ ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ. 20,000 ಚೀಲ ಈರುಳ್ಳಿಯನ್ನು ಭಾರತದ ಉತ್ತರ ಮತ್ತು ಈಶಾನ್ಯ ರಾಜ್ಯಗಳಿಗೆ ರವಾನಿಸಿ 52 ಲಕ್ಷ ರೂ. ಆದಾಯ ಗಳಿಸಿದೆ.
ಇದರ ಜೊತೆಗೆ ನಂಜನಗೂಡು ಟೌನ್‌ನಿಂದ 16 ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲುಗಳು ನೆಸ್ಲೆ ಉತ್ಪನ್ನಗಳು, ಟೈರ್‌ಗಳು ಮತ್ತು ಇತರ ಸರಕುಗಳನ್ನು ಸಾಗಿಸುವ ಮೂಲಕ 2 ಕೋಟಿ ರೂ. ಆದಾಯವನ್ನು ತಂದುಕೊಟ್ಟಿವೆ. 130 ಕ್ಕೂ ಹೆಚ್ಚು ಲೋಡ್ ಮಾಡಲಾದ ಪಾರ್ಸೆಲ್ ವ್ಯಾನ್‌ಗಳನ್ನು ವೇಗವಾಗಿ ಚಲಿಸುವ ಪ್ರಯಾಣಿಕ ರೈಲುಗಳಿಗೆ ಜೋಡಿಸಲಾಗಿದ್ದು, ರೂ.3.36 ಕೋಟಿ ಆದಾಯವನ್ನು ನೀಡಿವೆ.
ಪ್ರಯಾಣಿಕರಿಂದ 193 ಕೋಟಿ ಸಂಗ್ರಹ: ಪ್ರಯಾಣಿಕರ ವಿಭಾಗದಲ್ಲಿ ಪ್ರಸಕ್ತ ವರ್ಷದಲ್ಲಿ ಮೈಸೂರು ವಿಭಾಗದ ನಿಲ್ದಾಣಗಳಿಂದ ಹೊರಡುವ ಆಧಾರದ ಮೇಲೆ 14.04 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿ 193.80 ಕೋಟಿ ರೂ. ಗಳಿಸಿದೆ. ಹಾಗೂ ವಿಭಾಗದ ಇತರ ಆದಾಯದ ಗಳಿಕೆ ಕೂಡ 11 ಕೋಟಿ ಆಗಿದೆ. ಇದರೊಂದಿಗೆ ಸರಕು ಸಾಗಣೆ, ಪಾರ್ಸೆಲ್‌ಗಳು ಮತ್ತು ಪ್ರಯಾಣಿಕರ ಸಾಗಣೆಯಿಂದ ವಿಭಾಗದ ಒಟ್ಟು ಆದಾಯವು 902 ಕೋಟಿಗಳಷ್ಟಿದೆ.
ಇದರ ಹೊರತಾಗಿ ಸಮಯಪಾಲನೆಯಲ್ಲಿ ಮೈಸೂರು ವಿಭಾಗವು ಕಳೆದ ವರ್ಷದ ಶೇ.97.91ಗೆ ಹೋಲಿಸಿದರೆ 2021-22 ರ ಅವಧಿಯಲ್ಲಿ ಮೇಲ್/ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿ ಶೇ.99.14 ರಷ್ಟು ಸಮಯಪಾಲನೆಯನ್ನು ಸಾಧಿಸುವ ಮೂಲಕ ನೈಋತ್ಯ ರೈಲ್ವೆಯಲ್ಲಿಯೆ ಅತ್ಯುತ್ತಮ ಸಾಧನೆ ಮಾಡಿದೆ.
ಓದಿ: ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ: ಚುನಾವಣಾ ಅಜೆಂಡಾ ಸೆಟ್ ಮಾಡ್ತಾರಾ ಬಿಜೆಪಿ ಚಾಣಕ್ಯ!