ಮೈಸೂರು : ಯಡಿಯೂರಪ್ಪ ಹೆಸರಿಗಷ್ಟೇ ಮುಖ್ಯಮಂತ್ರಿ. ಆದರೆ, ಪುತ್ರ ವಿಜೆಯೇಂದ್ರ ಈಸ್ ಎ ಡಿಫ್ಯಾಕ್ಟರ್ ಸಿಎಂ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಬ್ಬರು ಸಿಎಂಗಳ ಆಡಳಿತ ನಡೆಯುತ್ತಿದೆ. ಒಬ್ಬರು ಯಡಿಯೂರಪ್ಪ ಇನ್ನೊಬ್ಬರು ವಿಜಯೇಂದ್ರ. ಈ ಸರ್ಕಾರ ಸತ್ತು ಹೋಗಿದೆ, ಇನ್ನು, ಸಚಿವರು ಕ್ರಿಯಾಶೀಲರಾಗಿದ್ದಾರೆ ಅನ್ನೋ ಪ್ರಶ್ನೆ ಇನ್ನೆಲ್ಲಿ?. ಸದನದಲ್ಲಿ ಎಲ್ಲ ವಿಚಾರ ಚರ್ಚೆ ಮಾಡ್ತೀವಿ ಎಂದು ಹೇಳಿದರು.
ಡಿಜೆ ಹಳ್ಳಿ, ಡ್ರಗ್ಸ್, ಕೋವಿಡ್ ಭ್ರಷ್ಟಚಾರ ಎಲ್ಲದರ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡ್ತೀವಿ. ಉಭಯ ಮಂಡಲ ಅಧಿವೇಶನಕ್ಕೆ ಕಾಂಗ್ರೆಸ್ ಸಿದ್ಧವಾಗಿದೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ ಕೇಂದ್ರ, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಪ್ರವಾಹಕ್ಕೆ ಪರಿಹಾರ ಇಲ್ಲ, ಜಿಎಸ್‍ಟಿ ಪರಿಹಾರ ಕೊಟ್ಟಿಲ್ಲ ಎಂದು ತಿಳಿಸಿದರು.
ಜಿಎಸ್‍ಟಿ ಬದಲು ಸಾಲ ತಗೊಳ್ಳಿ ಅಂತಾರೆ. ಅದಕ್ಕೆ ಸಿಎಂ ಕೋಲೆ ಬಸವನ ತರ ತಲೆ ಅಲ್ಲಾಡಿಸುತ್ತಿದ್ದಾರೆ. ಅದಕ್ಕೆ ಕರ್ನಾಟಕಕ್ಕೆ ನ್ಯಾಯ ಸಿಗಲಿ ಅಂತಾ ಕೇಳ್ತಿದ್ದೇನೆ. ಹೊಸದಾಗಿ ಕ್ಯಾಂಪೇನ್ ಮಾಡ್ತಿದ್ದೇವೆ. 6 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿಯೂ ಅಭಿವೃದ್ದಿ ಆಗಿಲ್ಲ. ಅದಕ್ಕೆ ಯುವಕರು ನಿರುದ್ಯೋಗ ದಿನ ಆಚರಿಸಿದ್ದಾರೆ ಎಂದರು.
ದೆಹಲಿಗೆ ಅನುದಾನ ತರ್ತೀವಿ ಅಂತಾ ಹೋಗಿದ್ದಾರೆ. ನೋಡೋಣ ಎಷ್ಟು ಹೊತ್ಕೊಂಡು ಬರ್ತಾರೆ ಎಂದು.. ಅಂತಾ ವ್ಯಂಗ್ಯವಾಡಿದರು. ಅಲ್ಲದೇ ಮಾಜಿ ಶಾಸಕ ಆರ್ ವಿ ದೇವರಾಜ್ ಪುತ್ರನಿಗೆ ಸಿಸಿಬಿ ನೋಟಿಸ್ ಜಾರಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಡ್ರಗ್ಸ್ ವಿಚಾರದಲ್ಲಿ ಯಾರೇ ಆದರೂ ಕ್ರಮಕೈಗೊಳ್ಳಲಿ ಎಂದರು.