ಮೈಸೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ಸರಕಾರವೇ ಇಲ್ಲ, ಸರ್ಕಾರವೇ ಸತ್ತುಹೋಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಕಾಂಗ್ರೇಸ್ ಸರ್ಕಾರ ಇದ್ದಿದರೇ ಕಲ್ಲನ್ನು ಹೊಡೆಯಬಹುದಿತ್ತು ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಆದರೆ, ಈಗ ಇವರ ಸರ್ಕಾರವಿದೆ ಹಾಗಾದರೆ ಇವರಿಗೆ ಕೊಳೆತ ಮೊಟ್ಟೆಯನ್ನು ಹೊಡೆಯಬೇಕಾ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಮಾತಿನ ಮಧ್ಯ ಚಪ್ಪಲಿಯಿಂದ ಹೊಡೆಯಬೇಕಾ ಎಂಬ ಪದ ಬಳಸಿ ತಕ್ಷಣ ಆ ಪದ ನಾನು ಬಳಸಬಾರದು ಇದನ್ನು ನಾನು ವಾಪಸ್ ಪಡೆಯುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಪಿಎಫ್ಐ ಬ್ಯಾನ್ ಮಾಡಿ : ಗಲಭೆ ಹಿನ್ನೆಲೆಯಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಮೇಲೆ ನಿಮಗೆ ಅನುಮಾನ ಇದ್ದರೆ ಬ್ಯಾನ್ ಮಾಡಿ. ಅದನ್ನು ಬಿಟ್ಟು ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬೇಡ. ಅಧಿಕಾರ ಇರುವುದು ನಿಮ್ಮ ಕೈಯಲ್ಲಿ ಅದನ್ನು ಚಲಾಯಿಸಿ, ಆಗದಿದ್ದರೆ ರಾಜೀನಾಮೆ ಕೊಟ್ಟು ಬನ್ನಿ. ನಮ್ಮ ಸರ್ಕಾರದಲ್ಲಿ ಮೈಸೂರಿನಲ್ಲಿ ಗಲಭೆಯಾಗಿತ್ತು ಆ ಗಲಭೆಯಲ್ಲಿ ಎಲ್ಲ ಪಕ್ಷದವರು ವಿದ್ಯಾರ್ಥಿಗಳು ಇದ್ದಾರೆ ಕೇಸ್ ವಾಪಸ್ ಪಡಿಯಿರಿ ಎಂದು ಹೇಳಿದರು ಅದಕ್ಕೆ ವಾಪಸ್ ಪಡೆದೆವು. ಅದು ಆಗಿ ತುಂಬಾ ವರ್ಷವಾಯಿತು ಅದಕ್ಕೂ ಈಗಿನ ಕೊಲೆಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದರು.
ಯು.ಪಿ ಮಾದರಿಯಲ್ಲಿ ಬುಲ್ಡೋಜರ್ಸ್ ಬಳಸುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೆ ಯು.ಪಿ ಮಾದರಿಯಲ್ಲಿ ರಾಜ್ಯ ಬದಲಾಗಿದೆ ಎಂದು ಒಪ್ಪಿಕೊಂಡಂತೆ ಆಗಿದೆ. ಯು.ಪಿ ಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, ಆ ರೀತಿಯಲ್ಲಿ ರಾಜ್ಯ ಆಗಿಬಿಟ್ಟಿದೆಯೋ ಎಂದು ಪ್ರಶ್ನೆ ಮಾಡಿದರು. ಮಾತೆತ್ತಿದರೆ ಹಿಂದಿನ ಸರ್ಕಾರದಲ್ಲಿ ಕೊಲೆ ಆಗಿತ್ತು ಎಂದು ಹೇಳುವ ನೀವು, ನಮಗೆ ಹೋಲಿಕೆ ಮಾಡಲು ಅಧಿಕಾರಕ್ಕೆ ಬಂದಿರಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : 'ಅವನು ಹೇಳಿದ್ದೇ ವೇದವಾಕ್ಯವಲ್ಲ, ಯಾರೂ ರಾಜೀನಾಮೆ ನೀಡಬೇಕಿಲ್ಲ': ಸಿದ್ದು ವಿರುದ್ಧ ಸಿಎಂ ಗರಂ