ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಅವರ ನಿವಾಸವನ್ನು ಸ್ಯಾನಿಟೈಸ್ ಮಾಡಿ 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ಜುಲೈ 28ರಿಂದ ಆ. 1ರವರೆಗೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದರು. ಅಲ್ಲದೆ ಅವರ ನಿವಾಸಕ್ಕೆ ರಾಜಕೀಯ ಮುಖಂಡರು ಹಾಗೂ ಗಣ್ಯರು ಬಂದು ಹೋಗಿದ್ದರು. ಆಪ್ತ ಕಾರ್ಯದರ್ಶಿ ಕುಮಾರ್, ಅಡುಗೆ ಭಟ್ಟ ರಾಜೇಶ್, ಭದ್ರತಾ ಪೊಲೀಸ್ ಸಿಬ್ಬಂದಿ ಜಯಕುಮಾರ್, ನಿಂಗಯ್ಯ, ಮಹದೇವ್ ಅವರಿಗೆ ಹೋಂ ಕ್ವಾರಂಟೈನ್ ಆಗಲು ವೈದ್ಯರು ಸಲಹೆ ನೀಡಿದ್ದಾರೆ.
ಆಗಸ್ಟ್ 1ರಂದು ಸಿದ್ದರಾಮಯ್ಯ ಮೈಸೂರಿನ ಪತ್ರಕರ್ತರ ಸಂಘದಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಪತ್ರಕರ್ತರ ಸಂಘದ ಕಚೇರಿಯನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ ಅಂದು ಭಾಗಿಯಾಗಿದ್ದ ಪತ್ರಕರ್ತರು ಹಾಗೂ ಕ್ಯಾಮರಾಮೆನ್ಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.