ಮೈಸೂರು: ಸಿದ್ದರಾಮನಹುಂಡಿ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮಸ್ಥರ ಜೊತೆ ಸುಮಾರು 40 ನಿಮಿಷಗಳ ಕಾಲ ವೀರಮಕ್ಕಳ ಕುಣಿತ ಕುಣಿದು ಸಂಭ್ರಮಿಸಿದರು. ಜಾನಪದ ವಾದ್ಯಗಳ ಸದ್ದಿಗೆ ತಕ್ಕಂತೆ ಗ್ರಾಮಸ್ಥರು, ಗ್ರಾಮದ ಹಳೇ ಸ್ನೇಹಿತರ ಜೊತೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
ಈ ಮೊದಲು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವೀರಮಕ್ಕಳ ಕುಣಿತ ಕುಣಿದಿದ್ದ ಸಿದ್ದರಾಮಯ್ಯ ಸುಮಾರು 15ವರ್ಷಗಳ ಬಳಿಕ ಸ್ವಗ್ರಾಮದ ಜಾತ್ರೆಯಲ್ಲಿ ಮತ್ತೆ ಕುಣಿದಿದ್ದಾರೆ. ತಮ್ಮ ನೆಚ್ಚಿನ ನಾಯಕರ ಕುಣಿತ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ನೂಕು ನುಗ್ಗಲು ನಡುವೆಯೇ ಸಿದ್ದರಾಮಯ್ಯ ಅವರ ಬಿಂದಾಸ್ ಕುಣಿತವನ್ನು ಗ್ರಾಮಸ್ಥರು ವೀಕ್ಷಿಸಿ ಸಂಭ್ರಮಾರಣೆ ಮಾಡಿದರು.
ಸಿದ್ದರಾಮೇಶ್ವರ ದೇವರ ಪೂಜೆಯಲ್ಲಿ ಭಾಗಿ: ಹುಟ್ಟೂರಿನ ಕುಲದೇವರಾದ ಸಿದ್ದರಾಮೇಶ್ವರ ದೇವರ ಪೂಜೆಯಲ್ಲಿ ಸಿದ್ದರಾಮಯ್ಯ ಅವರು ಪಾಲ್ಗೊಂಡರು. ಮೈಸೂರಿನ ಸಿದ್ದರಾಮನಹುಂಡಿಯಲ್ಲಿರುವ ಸಿದ್ದರಾಮೇಶ್ವರ ಪೂಜೆಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಸುತ್ತುವರಿದ ಗ್ರಾಮಸ್ಥರು ಜೈಕಾರ ಕೂಗಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮೂರಿನ ಜಾತ್ರೆಗೆ ನಾನು ಯಾವಾಗಲೂ ತಪ್ಪಿಸಿಲ್ಲ. ನಾನು ಇದೇ ಊರಿನವನು. ಈ ಊರಿನೊಂದಿಗೆ ನಿಕಟ ಸಂಪರ್ಕ ಇದೆ. ಜಾತ್ರೆಗೆ ಯಾವಾಗಲೂ ಮಿಸ್ ಮಾಡಿಲ್ಲ. ಸಚಿವನಾಗಿದ್ದಾಗಲೂ ಬಂದಿದ್ದೆ. ಮುಖ್ಯಮಂತ್ರಿ ಆಗಿದ್ದಾಗಲೂ ಬಂದಿದ್ದೆ. ಈಗಲೂ ಬಂದಿದ್ದೇನೆ. ಹಿಂದೆ ಎರಡು ವರ್ಷಗಳಿಗೊಮ್ಮೆ ಜಾತ್ರೆ ನಡೆಯುತ್ತಿತ್ತು. ಬಳಿಕ ಮೂರು ವರ್ಷಗಳಿಗೊಮ್ಮೆ ಆಯ್ತು.
ಇದನ್ನೂ ಓದಿ: ವಯಸ್ಸಿನ ಬಗ್ಗೆ ಪರಸ್ಪರ ಕಾಲೆಳೆದುಕೊಂಡ ಸಿದ್ದರಾಮಯ್ಯ- ಈಶ್ವರಪ್ಪ
ಕೋವಿಡ್ ಕಾರಣ ಕಳೆದ ವರ್ಷ ಜಾತ್ರೆ ಮಾಡಿರಲಿಲ್ಲ. ಇದೀಗ ಸಂಭ್ರಮದಿಂದ ಜಾತ್ರೆ ಜರುಗುತ್ತಿದ್ದು, ಇಲ್ಲಿಗೆ ಬಂದು ಹೋಗೋದೆ ಖುಷಿ ಎಂದು ತಿಳಿಸಿದರು. ಇನ್ನೂ ಹಿಂದೆಲ್ಲಾ ವೀರ ಕುಣಿತ ಕುಣಿಯುತ್ತಿದ್ದೆ. ಈ ಬಾರಿ ವೀರ ಕುಣಿತ ಕುಣಿಯಲು ಆಗಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯನವರು ಬಳಿಕ ಗ್ರಾಮಸ್ಥರೊಂಗಿಗೆ ವೀರ ಕುಣಿತ ಕುಣಿದು ಸಂಭ್ರಮಿಸಿದರು.