ಮೈಸೂರು: ನಮ್ಮ ಬಿಜೆಪಿ ಸರ್ಕಾರಕ್ಕೆ ಬಹುಮತವಿದ್ದು, ಸುಗಮವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆಪರೇಷನ್ ಕಮಲದ ಅವಶ್ಯಕತೆ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಹೈಕಮಾಂಡ್ ಒಪ್ಪಿದರೆ ಈಗಲೂ ಕಾಂಗ್ರೆಸ್ನ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ಅದು ಅವರ ಅಭಿಪ್ರಾಯ. ಈ ಕುರಿತು ಅವರನ್ನೇ ಕೇಳಬೇಕು. ಈಗ ಆಪರೇಷನ್ ಕಮಲದ ಅವಶ್ಯಕತೆ ಇಲ್ಲ, ನಮ್ಮಲ್ಲಿ ಬಹುಮತವಿದೆ. ಸರ್ಕಾರ ಸುಗಮವಾಗಿ ನಡೆಯುತ್ತಿದೆ. ಕೋವಿಡ್ ಕಂಟ್ರೋಲ್ ಮಾಡಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜ್ಯ ಬಿಜೆಪಿಯಲ್ಲಿ ಪ್ರತ್ಯೇಕ ಸಭೆಗಳು ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿ, ಎಂಎಲ್ಸಿ ಹಾಗೂ ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಭಿನ್ನಮತವಿಲ್ಲ. ಈ ಬಗ್ಗೆ ಹೈಕಮಾಂಡ್, ರಾಷ್ಟ್ರೀಯ ಅಧ್ಯಕ್ಷರು ಇದ್ದಾರೆ, ಅವರು ನೋಡಿಕೊಳ್ಳುತ್ತಾರೆ. ರಾಜ್ಯದ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಇದಕ್ಕೆ ಯಾರೂ ಬೇರೆ ರೀತಿಯಲ್ಲಿ ಅರ್ಥ ಕಲ್ಪಿಸುವುದು ಬೇಡ ಎಂದರು.
ಇನ್ನು ಮೈಸೂರಿನಲ್ಲಿ ಮೃಗಾಲಯ ಓಪನ್ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಅರಮನೆ ಸೇರಿದಂತೆ ಇತರೆ ಪ್ರವಾಸೋದ್ಯಮ ಸ್ಥಳಗಳ ಓಪನ್ಗೆ ಪ್ರಸ್ತಾವನೆ ಸಲ್ಲಿಸಿಲ್ಲ. ವಿಧಾನ ಪರಿಷತ್ನಲ್ಲಿ ಖಾಲಿಯಾಗುವ ಸ್ಥಾನಗಳ ಭರ್ತಿಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.