ಮೈಸೂರು: ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿಲ್ಲ. ಮುಡಾ ಸಭೆಯಲ್ಲಿ ಚರ್ಚಿಸಿ ತೆಗೆದುಕೊಳ್ಳಲಾಗಿದೆ. ನನ್ನ ಮೇಲೆ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಡಿರುವ ಆರೋಪಗಳು ನಿರಾಧಾರ ಎಂದು ಮುಡಾ ಅಧ್ಯಕ್ಷ ರಾಜೀವ್ ಪತ್ರಿಕಾಗೋಷ್ಠಿಯಲ್ಲಿ ಸ್ವಷ್ಟಪಡಿಸಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಮುಡಾ ಅಧ್ಯಕ್ಷ ರಾಜೀವ್, ಮುಡಾದಲ್ಲಿ ಕೆಲವು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಬಗ್ಗೆ ಅನುಮಾನವಿದೆ ಎಂದಿದ್ದರು. ಈ ಬಗ್ಗೆ ತನಿಖೆ ಅಗತ್ಯವಿದೆ ಎಂಬ ಮಾಧ್ಯಮಗಳ ವರದಿಯ ಬಗ್ಗೆ ಸ್ಪಷ್ಟನೆ ನೀಡಿದ ರಾಜೀವ್, ನಾನು ಯಾವುದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿಲ್ಲ, ಮುಡಾ ಸಭೆಯಲ್ಲಿ ಚರ್ಚಿಸಿದ ಬಳಿಕವೇ ಸರ್ವ ಸದಸ್ಯರ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ನಿರ್ಣಯಗಳನ್ನು ಕೈಗೊಳ್ಳಲಾಗಿ ಎಂದು ತಿಳಿಸಿದರು.
ರೋಹಿಣಿ ಸಿಂಧೂರಿ ಮುಡಾ ಸಭೆಯಲ್ಲಿ 500 ನಿರ್ಣಯಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದರ ಬಗ್ಗೆ ತನಿಖೆ ಅಗತ್ಯ ಎಂದು ಹೇಳಿದ್ದರು. ಈ ಬಗ್ಗೆ ಯಾವುದೇ ಅನುಮಾನ ಬೇಡ, ಎಲ್ಲಾ ನಿರ್ಣಯಗಳನ್ನು ಸಭೆಯಲ್ಲೇ ಚರ್ಚಿಸಿ, ಒಪ್ಪಿಗೆ ಪಡೆದು ತೆಗೆದುಕೊಳ್ಳಲಾಗುವುದು ಎಂದರು. ರೋಹಿಣಿ ಸಿಂಧೂರಿ ಅವರು ಮಾಡಿದ ನನ್ನ ಮೇಲಿನ ಆರೋಪಗಳ ಬಗ್ಗೆ ಪಕ್ಷದ ಹಿರಿಯರು ಹಾಗೂ ಹಿತೈಷಿಗಳ ಜೊತೆ ಚರ್ಚೆ ಮಾಡಿ ಮುಂದೇನು ಮಾಡಬೇಕು ಎಂಬುದನ್ನು ವಿಚಾರ ಮಾಡುತ್ತೇನೆ ಎಂದರು.
ಮೈಸೂರಿನ ಕೆರ್ಗಳ್ಳಿ ಬಡಾವಣೆ ಸಂಪೂರ್ಣ ತನಿಖೆ ಮಾಡಲಾಗುತ್ತಿದ್ದು 2013 ರವರೆಗೆ ಭೂಮಿಯನ್ನು ಸ್ವಾಧೀನ ಪಡೆಸಿಕೊಂಡ ವ್ಯಕ್ತಿಗಳಿಗೆ ಪರಿಹಾರ ನೀಡಲಾಗಿದ್ದು, ಇಲ್ಲಿ ಭೂಮಿ ಇಲ್ಲದವರಿಗೂ ಪರಿಹಾರ ನೀಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ. ಕೆರ್ಗಳ್ಳಿಯ ಲ್ಯಾಂಡ್ ಸ್ಕೇಚ್ ಮಾಡಿಸಿದ ನಂತರ ಭೂಮಿ ಇಲ್ಲದವರು ಪರಿಹಾರ ಪಡೆದಿರುವ ಮಾಹಿತಿ ಗೊತ್ತಾಗಿದ್ದು, ಈ ಬಗ್ಗೆ ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇನ್ನು ರೋಹಿಣಿ ಸಿಂಧೂರಿ, ಸಾ.ರಾ.ಮಹೇಶ್- ರಾಜೀವ್ ಬಿಸ್ನೆಸ್ ಪಾರ್ಟ್ನರ್ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಜೀವ್, ನಾನು ಮತ್ತು ಸಾ.ರಾ.ಮಹೇಶ್ ಸ್ನೇಹಿತರಷ್ಟೇ. ಬಿಸ್ನೆಸ್ ಪಾರ್ಟ್ನರ್ ಅಲ್ಲ. ನಾನು ಕಳೆದ 10 ವರ್ಷದಿಂದ ಪಾರದರ್ಶಕವಾಗಿ ತೆರಿಗೆ ಕಟ್ಟಿ ಬಿಸ್ನೆಸ್ ಮಾಡುತ್ತಿದ್ದೇನೆ ಎಂದು ತಮ್ಮನ್ನು ಮುಡಾ ಅಧ್ಯಕ್ಷ ಸಮರ್ಥಿಸಿಕೊಂಡರು.
ಇದನ್ನೂ ಓದಿ: ಮೈಸೂರು : ‘ಮೂಡಾ’ ಹೆಸರಲ್ಲಿ ಕೋಟ್ಯಂತರ ರೂ.ವಂಚನೆ.. ಆರೋಪಿ ಸಾಗರ್ ಬಂಧನ..