ಮೈಸೂರು: ಪ್ರತಿಪಕ್ಷಗಳಿಗೆ ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ವಾಸ್ತವಾಂಶ ಗೊತ್ತಿಲ್ಲ. ದೇಶದ ಐಕ್ಯತೆಗಾಗಿ ಈ ಕಾಯ್ದೆಗಳನ್ನು ತರಲಾಗಿದೆ. ವಾಸ್ತವಾಂಶ ಅರಿಯದೇ ಪ್ರತಿಭಟನೆ ಮಾಡುವುದು ತಪ್ಪು ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಪುಟ್ಟಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ದೇಶಗಳಲ್ಲಿ ಹಿಂದೂ ಸೇರಿ ಹಲವು ಧರ್ಮೀಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ರಾಹುಲ್ ಗಾಂಧಿ ವಿಚಾರಗಳ ಬಗ್ಗೆ ಯೋಚನೆ ಮಾಡದೇ ಮಾತನಾಡುತ್ತಾರೆ. ರಾಹುಲ್ ಗಾಂಧಿ ಮೊದಲು ದೇಶದ ಬಗ್ಗೆ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು. ದೇಶದ ಜನರಿಗೆ ಎಲ್ಲವೂ ಅರ್ಥವಾಗಿದೆ. ಈ ವಿಚಾರದಲ್ಲಿ ವಿರೋಧ ಪಕ್ಷದ ನಡವಳಿಕೆ ಖಂಡನಾರ್ಹ ಎಂದರು.
ಸಿದ್ದರಾಮಯ್ಯ ಅವರು ಕಾನೂನು ಪಂಡಿತರು. ಗೋಲಿಬಾರ್ ಯಾವಾಗ ನಡೆಯುತ್ತೆ ಅನ್ನೊದು ಅವರಿಗೆ ಗೊತ್ತಿದೆ. ಮುಂದಾಗುವ ಅನಾಹುತ ತಪ್ಪಿಸಲು ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಅನಾವಶ್ಯಕ ಹೇಳಿಕೆ ನೀಡುವ ಸಿದ್ದರಾಮಯ್ಯ ಹಾಗೂ ಹೆಚ್ಡಿಕೆ ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕುಟುಕಿದರು.
ರಾಜ್ಯದ ಅಭಿವೃದ್ಧಿಗೆ ಯೋಜನಾ ಮಂಡಳಿಯ ಪಾತ್ರ ಹಾಗೂ ಸಮನ್ವಯತೆಯ ಅಂಶಗಳನ್ನು ಗುರುತಿಸಲಾಗಿದೆ. ಯೋಜನಾ ಪ್ರಕ್ರಿಯೆಗಳಿಗೆ ಕಾಲಮಿತಿ ಅಗತ್ಯ. ಯೋಜನೆಗಳನ್ನು ತಳಮಟ್ಟದ ವರೆಗೂ ತಲುಪಿಸುವ ಕುರಿತು ಚರ್ಚೆ ಮಾಡಲಾಗಿದೆ ಎಂದರು.
ಇತರ ರಾಜ್ಯಗಳ ಯೋಜನಾ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲಾಗುವುದು. ಸರ್ಕಾರದ ಅನುದಾನಗಳು ವ್ಯರ್ಥವಾಗದಂತೆ ಯೋಜನೆ ಅನುಷ್ಠಾನಕ್ಕೆ ತರುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.