ಮೈಸೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ನನ್ನ ಬಳಿ ಸಹ ಹೇಳಿದ್ದರು. ಈ ಬಗ್ಗೆ ನಾನು ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. ತನಿಖೆ ನಡೆಯುತ್ತಿದೆ. ಯಾರು ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅಕ್ರಮ ನಡೆದಿದೆ ಎಂದು ನನ್ನ ಬಳಿ ಕೂಡ ಬಂದು ಹೇಳಿದ್ದರು. ನಾನು ಸಂಬಂಧ ಪಟ್ಟವರಿಗೆ ತನಿಖೆಗೆ ಹೇಳಿದ್ದೆ. ತನಿಖೆ ನಡೆಯುತ್ತಿದ್ದು, ಯಾರು ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದರು.
ಓದಿ: ಪಿಎಸ್‌ಐ ನೇಮಕಾತಿ ಅಕ್ರಮ: ಗೃಹ ಸಚಿವರ ರಾಜೀನಾಮೆಗೆ ಪ್ರಿಯಾಂಕ್ ಖರ್ಗೆ ಆಗ್ರಹ
ಬಿಜೆಪಿಯವರು ಈವರೆಗೆ ಕಡ್ಲೆಪುರಿ ತಿನ್ನುತ್ತಿದ್ದರಾ? : ಕಾಂಗ್ರೆಸ್ ಆಡಳಿತ ಕಾಲದ ಭ್ರಷ್ಟಾಚಾರ ಕಡತವನ್ನ ಹೊರ ತೆಗೆಯುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿಯವರು ಈವರೆಗೆ ಕಡ್ಲೆಪುರಿ ತಿನ್ನುತ್ತಾ ಇದ್ದರಾ, ಇಷ್ಟು ವರ್ಷ ಸಾಕ್ಷಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದರಾ, ಬಾಯಿಗೆ ಕಡುಬು ಇಟ್ಟುಕೊಂಡಿದ್ದರಾ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.
ಬಿಜೆಪಿ ಅಧಿಕಾರಕ್ಕೆ ಬಂದು ಎಷ್ಟು ವರ್ಷ ಆಯಿತು?, ಹಿಂದೆ 5 ವರ್ಷ ವಿರೋಧ ಪಕ್ಷದಲ್ಲಿರಲಿಲ್ವಾ?. ಆಗ ಯಾಕೆ ಭ್ರಷ್ಟಾಚಾರದ ಮಾತು ಹೇಳಲಿಲ್ಲ. ಈಗ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಅದಕ್ಕೆ ಈ ರೀತಿ ಹೇಳುತ್ತಿದ್ದಾರೆ. ಜನರು ಇವರ ಮಾತನ್ನು ನಂಬುವುದಿಲ್ಲ. ಭ್ರಷ್ಟಾಚಾರದ ವಿಚಾರ ಗೊತ್ತಿದ್ದರು ಅದನ್ನು ಮುಚ್ಚಿಡುವುದು ಅಪರಾಧ. ಈಗ ಇವರ ಮಾತನ್ನ ಜನ ನಂಬುವುದಿಲ್ಲ ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ: PSI ನೇಮಕಾತಿ ಅಕ್ರಮ.. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್ ಬಂಧನ.. ಹಿಂದೂ ಮುಖಂಡೆ ನಾಪತ್ತೆ..
ಮಠಕ್ಕೆ ಅನುದಾನ ಪಡೆಯಲು ಕಮೀಷನ್ ಕೊಡಬೇಕು ಎಂಬ ಶ್ರೀ ದಿಂಗಾಲೇಶ್ವರ ಸ್ವಾಮೀಜಿಯ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯನವರು ಉತ್ತರಿಸಿದರು.