ಮೈಸೂರು/ ಭಟ್ಕಳ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಮಸೂದೆ(ಸಿಎಎ)ಯನ್ನು ಹಿಂಪಡೆಯಬೇಕು ಎಂದು ಮೈಸೂರು ಹಾಗೂ ಭಟ್ಕಳದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಂಜನಗೂಡು ತಾಲೂಕು ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ, ಸ್ವಾತಂತ್ರ್ಯ ಪೂರ್ವದಿಂದಲೂ ಬಹುತೇಕ ಹಳ್ಳಿಗಳಿಂದ ಕೂಡಿದ ಭಾರತದಲ್ಲಿ ಇಲ್ಲಿಯ ಮೂಲ ನಿವಾಸಿಗಳಾದ ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪ ಸಂಖ್ಯಾತರು ಬಡತನ ಮತ್ತು ಅನಕ್ಷರತೆಯಿಂದ ಇದ್ದಾರೆ. ಇದರಿಂದ ತಮ್ಮ ದಾಖಲೆಗಳನ್ನು ಕ್ರೂಢೀಕರಿಸಿ ಇಟ್ಟುಕೊಳ್ಳುವುದರಲ್ಲಿ ವಿಫಲವಾಗಿದ್ದಾರೆ. ಕೇಂದ್ರ ಸರ್ಕಾರ ಯಾರು ದೇಶಿಯರು, ಯಾರು ವಲಸಿಗರು ಎಂದು ಪತ್ತೆ ಹಚ್ಚುತ್ತೇವೆ ಎನ್ನುವ ನೆಪವೊಡ್ಡಿ ಎನ್‌ಆರ್‌ಸಿ ಹಾಗೂ ಸಿಎಎ ಜಾರಿ ಮಾಡಲು ಮುಂದಾಗಿದ್ದಾರೆ, ಇದರಿಂದ ದೇಶದ ಜನರಿಗೆ ಅನಾನೂಕೂಲವಾಗಲಿದೆ ಎಂದು ಕಿಡಿಕಾರಿದರು.
ಪೌರತ್ವ ಕಾಯ್ದೆ ವಿರೋಧಿಸಿ ಭಟ್ಕಳದಲ್ಲಿ ತಂಜೀಂನಿಂದ ಬೃಹತ್ ಪ್ರತಿಭಟನೆ ನಡೆಸಿಲಾಗಿದೆ. ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷರಾದ ಎಂ.ಆರ್ ನಾಯ್ಕ್ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಪ್ರತಿಭಟನಾ ಮೆರವಣಿಗೆ ಶಾಂತಿಯುತವಾಗಿ ನಡೆದಿದ್ದು, ನಾವು ಯಾವುದೇ ಜಾತಿ, ಸಮಾಜ, ಪಂಥ ಎಂದು ಹೇಳಿಕೊಳ್ಳುವ ಮೊದಲು ನಾವು ಭಾರತೀಯರು ಎಂದು ಭಾವಿಸಿ ಸಮಾನತೆ ಕಾಪಾಡಿಕೊಂಡು ಹೋಗಬೇಕು ಎಂದರು.
ತುರ್ತು ಸಭೆಗೆ ಆಹ್ವಾನ: ಈ ಪ್ರತಿಭಟನೆಗೆ ಭಾಗಿಯಾಗಿರುವ ನಾಮಧಾರಿ ಅಧ್ಯಕ್ಷರ ವಿರುದ್ಧ ಕೆಲವು ನಾಮಧಾರಿ ಸಮಾಜದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸ್ಪಷ್ಟನೆ ಕೊಡುವುದರ ಜೊತೆಗೆ ಮುಂದಿನ ನಡೆಯ ಬಗ್ಗೆ ಸಮಾಜದ ಭಾಂದವರು ಸೂಕ್ತ ತೀರ್ಮಾನಕ್ಕೆ ಬರಬೇಕಾಗಿರುವುದರಿಂದ ತುರ್ತು ಸಭೆ ಕರೆಯಲಾಗಿದೆ ಎಂದು ಎಂ ಆರ್ ನಾಯ್ಕ್ ತಿಳಿಸಿದ್ದಾರೆ.