ಮೈಸೂರು : ಖಾಸಗಿ ಆಸ್ಪತ್ರೆಯ ದತ್ತಾಂಶವಿರುವ ಕಂಪ್ಯೂಟರ್ ಅನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ. ಬಿಟ್ ಕಾಯಿನ್ ರೂಪದಲ್ಲಿ ಹಣ ನೀಡುವಂತೆ ಬೇಡಿಕೆ ಇಟ್ಟಿರುವಂತಹ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಈ ಬಗ್ಗೆ ದೂರು ದಾಖಲಾಗಿದೆ. ತನಿಖೆಗೆ ನಗರ ಪೊಲೀಸ್ ಕಮಿಷನರ್ ಆದೇಶ ನೀಡಿದ್ದಾರೆ. ಮೈಸೂರು ನಗರದ ಖಾಸಗಿ ಆಸ್ಪತ್ರೆಯ ಮಾಲೀಕರು ನೀಡಿದ ದೂರಿನ ಅನ್ವಯ ನಗರದ ಸೈಬರ್ ಹಾಗೂ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯ ಕಂಪ್ಯೂಟರ್ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ತಾಂತ್ರಿಕ ದೋಷ ಇರಬಹುದೆಂದು ಆಸ್ಪತ್ರೆ ಸಿಬ್ಬಂದಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಕೆಲ ಸಮಯದ ಬಳಿಕ ಹ್ಯಾಕರ್ಗಳು ಆಸ್ಪತ್ರೆಯವರಿಗೆ ಸಂದೇಶ ಕಳುಹಿಸಿದ್ದರು.
ನಿಮ್ಮ ಆಸ್ಪತ್ರೆಯ ದತ್ತಾಂಶವನ್ನು ಹ್ಯಾಕ್ ಮಾಡಲಾಗಿದೆ. ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ ನೀಡಿದ ನಂತರವಷ್ಟೇ ದತ್ತಾಂಶವನ್ನು ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ಎಲ್ಲ ದತ್ತಾಂಶಗಳು ಹಾರ್ಡ್ ಡಿಸ್ಕ್‌ನಲ್ಲಿ ಸೇವ್ ಆಗಿದ್ದ ಕಾರಣ ಯಾವುದೇ ತೊಂದರೆ ಉಂಟಾಗಿಲ್ಲ.
ತನಿಖಾ ತಂಡ ರಚನೆ : ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆಗೆ ಇನ್ಸ್‌ಪೆಕ್ಟರ್ ಶೇಖರ್ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ತಂಡ ಕಾರ್ಯ ಪ್ರವೃತ್ತವಾಗಿದೆ.
ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ: ನೆಲಕ್ಕುರುಳಿದ 8 ಎಲೆಕ್ಟ್ರಿಸಿಟಿ ಕಂಬಗಳು