ಮೈಸೂರು: ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆ ದಸರಾ ಉತ್ಸವದ ಪ್ರಯುಕ್ತ ಅರಮನೆಯಲ್ಲಿ ನಡೆಯಲಿರುವ ಶರನ್ನವರಾತ್ರಿ ಪೂಜಾ ಕೈಂಕರ್ಯದಲ್ಲಿ ಅರಮನೆ ಕುಟುಂಬಸ್ಥರ ಬಾಗವಹಿಸುವಿಕೆಯನ್ನು ನಿಷೇಧಿಸಲಾಗಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಕೊರೊನಾ ಮೂರನೇ ಅಲೆಯ ದೃಷ್ಟಿಯಿಂದ ಮೈಸೂರು ಅರಮನೆಯಲ್ಲಿ 2021ಸಾಲಿನ ಶರನ್ನವರಾತ್ರಿ ಪೂಜಾ ವಿಧಿಗಳನ್ನು ಕೇವಲ ಸಾಂಪ್ರದಾಯಕವಾಗಿ ನೆರವೇರಿಸಲಾಗುವುದು. ಮುನ್ನೆಚ್ಚರಿಕೆ ಕ್ರಮ ಅತಿ ಅವಶ್ಯಕವಾಗಿರುದರಿಂದ ಆಚರಣೆಯಲ್ಲಿ ಕುಟುಂಬ ಸದಸ್ಯರನ್ನು ಒಳಗೊಂಡಂತೆ ಸಾರ್ವಜನಿಕರು ಹಾಗೂ ಮಾಧ್ಯಮದವರಿಗೆ ಭಾಗವಹಿಸುವಿಕೆ ಇರುವುದಿಲ್ಲ. ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಎಲ್ಲರ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದು ರಾಜವಂಶಸ್ಥೆ ಪ್ರಮೋದದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.7ರಂದು ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಅಂದಿನಿಂದಲೇ ಮೈಸೂರಿನ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭಗೊಳ್ಳಲಿದೆ.