ಮೈಸೂರು: ಹತ್ತು ವರ್ಷದಿಂದ ಗಾಂಜಾ ಮಾರಾಟ ಮಾಡುತ್ತಿದ್ದ ತಂದೆ-ಮಗನನ್ನು ಸಿಸಿಬಿ ಪೊಲೀಸರು ಬಂಧಿಸಿ ಇಬ್ಬರಿಂದ 32 ಕೆಜಿ ಗಾಂಜಾ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸಿದ್ದರಾಜು (60), ಇವರ ಮಗ ಮಂಜುನಾಥ್ (36) ಬಂಧಿತ ಆರೋಪಿಗಳು. ಆರೋಪಿ ಸಿದ್ದರಾಜು ಕೆಆರ್ಎಸ್ ರಸ್ತೆ ಬಳಿಯ ಪಿಕೆಟಿಬಿ ಆಸ್ಪತ್ರೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬುದರ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅವರಿಂದ 5 ಕೆಜಿ, 450 ಗ್ರಾಂ. ಗಾಂಜಾ ಹಾಗೂ 1400 ನಗದನ್ನು ವಶಪಡಿಸಿಕೊಂಡಿದ್ದಾರೆ.
ಸುಮಾರು 30 ವರ್ಷದಿಂದ ಕೆಆರ್ಎಸ್ ಹುಲಿಕೆರೆ ವೃತ್ತದ ಎಡತಿಟ್ಟು ಗ್ರಾಮದ ಕಾವೇರಿ ನದಿ ಹರಿಯುವ ಬಯಲು ಪ್ರದೇಶದ ಮರಗಿಡಗಳ ಪೊದೆಗಳಲ್ಲಿ ಯಾರಿಗೂ ತಿಳಿಯದಂತೆ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದರೆನ್ನಲಾಗಿದೆ. ಇದನ್ನು ತನ್ನ ಮಗನೊಂದಿಗೆ ಸೇರಿಕೊಂಡು ಬೆಳಗೊಳದಲ್ಲಿರುವ ತನ್ನದೇ ಟೀ ಅಂಗಡಿಯಲ್ಲಿ ಗೌಪ್ಯವಾಗಿ ಮಾರಾಟ ಮಾಡುತ್ತಿದಿದ್ದಾಗಿ ಸಿದ್ದರಾಜು ಒಪ್ಪಿಕೊಂಡಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಬೆಳಗೊಳದ ಟೀ ಸ್ಟಾಲ್ ಮೇಲೆ ದಾಳಿ ಮಾಡಿದ ಪೊಲೀಸರು, ಮಂಜುನಾಥನನ್ನು ವಶಕ್ಕೆ ಪಡೆದು 14 ಕೆಜಿ, 112 ಗ್ರಾಂ ಗಾಂಜಾ ಮತ್ತು 5380 ರೂ. ನಗದು ವಶಪಡಿಸಿಕೊಂಡಿದ್ದಾರೆ.