ಮೈಸೂರು: ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದ ಮಹಿಳಾ ಪಿಡಿಒ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಪಿಡಿಒ ಸಾವಿತ್ರಮ್ಮ(44) ಮೃತರು. ಸೆಪ್ಟೆಂಬರ್ 13ರಂದು ಸುತ್ತೂರು ಗ್ರಾ.ಪಂ ಕಚೇರಿ ಒಳ ಭಾಗದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಂಜನಗೂಡಿನ ಹುಲ್ಲಹಳ್ಳಿ ಮತ್ತು ಸುತ್ತೂರು ಗ್ರಾಮಗಳಲ್ಲಿ 6 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸಾವಿತ್ರಮ್ಮ ಕಾರ್ಯ ನಿರ್ವಹಿಸುತ್ತಿದ್ದರು. ಸುತ್ತೂರು ಗ್ರಾ.ಪಂ ನಲ್ಲಿ ಜನಪ್ರತಿನಿಧಿಯೊಬ್ಬರು ಸಾವಿತ್ರಮ್ಮಗೆ ಧಮ್ಕಿ ಹಾಕಿದಾಗ ಕುಸಿದು ಬಿದ್ದಿದ್ದರೆಂದು ಹೇಳಲಾಗ್ತಿದೆ. ಆದರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.