ಮೈಸೂರು: ಉದ್ಯಮಿ ಓಂಪ್ರಕಾಶ್ ಕುಟುಂಬದವರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮುಂದುವರೆಸಿದ್ದು, ಈಗಾಗಲೇ ಪಿಸ್ತೂಲ್ ನೀಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಶುಕ್ರವಾರ ಮುಂಜಾನೆ ಗುಂಡ್ಲುಪೇಟೆಯ ಹೆದ್ದಾರಿ ಪಕ್ಕದ ಜಮೀನೊಂದರಲ್ಲಿ ಉದ್ಯಮಿ ಓಂಪ್ರಕಾಶ್ ಕುಟುಂಬದವರ ಸಾಮೂಹಿಕ ಆತ್ಮಹತ್ಯೆ ನಡೆದಿತ್ತು. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 0.32 ಮ್ಯಾಗ್ಜಿನ್ ಪಿಸ್ತೂಲ್‌ನ ಬಳಸಲಾಗಿತ್ತು.
ಓಂಪ್ರಕಾಶ್, ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಶಂಕಿಸಲಾಗಿತ್ತು. ಈ ಕುರಿತಂತೆ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಅಚ್ಚರಿ ಸಂಗತಿಯೊಂದು ತಿಳಿದಿದೆ. ಓಂ ಪ್ರಕಾಶ್ ಅವರಿಗೆ ಯಾವುದೇ ಗನ್ ಲೈಸೆನ್ಸ್ ಇರಲಿಲ್ಲ. ಹಾಗಾಗಿ ಗನ್ ನೀಡಿದ ನಾಗೇಶ್ ಎಂಬುವರನ್ನು ಗುಂಡ್ಲುಪೇಟೆಯ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಮನೆಯ ಸಿಸಿಟಿವಿ ಆಫ್:
ಓಂಪ್ರಕಾಶ್ ಕುಟುಂಬದವರು ವಾಸವಿದ್ದ ಮೈಸೂರಿನ ದಟ್ಟಗಳ್ಳಿಯ ಮನೆಯ ನಿವಾಸದಲ್ಲಿ ಹೊರಗೆ ಮತ್ತು ಒಳಗೆ ಸಿಸಿಟಿವಿ ಹಾಕಲಾಗಿತ್ತು. ಆದರೆ, ಓಂಪ್ರಕಾಶ್ ಸಾಯುವ ವಾರದ ಹಿಂದೆಯೇ ಸಿಸಿಟಿವಿ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಇದ್ದ ಮನೆಯನ್ನು ಮಂಡ್ಯದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು ಎನ್ನಲಾಗಿದ್ದು, ಆತ ಸಹ ಮನೆಯನ್ನು ಬಿಟ್ಟುಕೊಡುವಂತೆ ದಂಬಾಲು ಬಿದ್ದಿದ್ದ ಎನ್ನಲಾಗಿದೆ.
ಸಾಲಗಾರರ ಕಾಟದಿಂದ ಓಂಪ್ರಕಾಶ್ ತಪ್ಪಿಸಿಕೊಳ್ಳಲು ಖಾಸಗಿ ಗನ್ಮ್ಯಾನ್ಗಳನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ. ಪೊಲೀಸರು ಈತ ಹೊಂದಿದ್ದ ಮೂರು ಬ್ಯಾಂಕ್ ಖಾತೆಗಳನ್ನೂ ಪರಿಶೀಲನೆ ಮಾಡಿದ್ದು, ಅದರಲ್ಲಿ ಕೇವಲ 48,000 ರೂ. ಮಾತ್ರ ಇತ್ತು ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.