ಮೈಸೂರು: ಕೊರೊನಾ ಹಾಟ್ಸ್ಪಾಟ್ ಆಗಿ ಕೆಂಪು ಪಟ್ಟಿಯಲ್ಲಿದ್ದ ಮೈಸೂರು 50 ದಿನಗಳಲ್ಲಿ ಕೊರೊನಾ ಮುಕ್ತ ಜಿಲ್ಲೆಯಾಗಿದ್ದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ತಬ್ಲಿಘಿ ಜಮಾತ್ ಹಾಗೂ ಜುಬಿಲಂಟ್ ಕಾರ್ಖಾನೆಯಿಂದಾಗಿ ಮೈಸೂರು ರಾಜ್ಯದಲ್ಲಿ 2ನೇ ಅತಿಹೆಚ್ಚು ಸೋಂಕಿತರು ಇರುವ ಜಿಲ್ಲೆಯಾಗಿತ್ತು. ಮೊದಲ ಪ್ರಕರಣ ಜುಬಿಲಂಟ್ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ನಂತರ ಎಲ್ಲಾ ನೌಕರರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಹೋಮ್ ಕ್ವಾರಂಟೈನ್ ಒಳಪಡಿಸಲಾಯಿತು. ಸೋಂಕು ಹರಡದಂತೆ ಇಡೀ ನಂಜನಗೂಡನ್ನು ಸೀಲ್ ಡೌನ್ ಮಾಡಲಾಗಿತ್ತು.
ದೆಹಲಿಯ ತಬ್ಲಿಘ್ ಜಮಾತ್ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದವರನ್ನು ಕ್ವಾರಂಟೈನ್ ಮಾಡಿ, ಸೋಂಕು ಸಮುದಾಯ ಮಟ್ಟದಲ್ಲಿ ಹರಡದಂತೆ ನೋಡಿಕೊಳ್ಳುವುದರಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಯಶ್ವಸಿಯಾಯಿತು. ಜನರಲ್ಲಿ ಜಾಗೃತಿ ಸೋಂಕು ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಲಾಕ್ಡೌನ್ ವೇಳಿ ಜನರು ಅನುಸರಿಸಬೇಕಾದ ನಿಯಮಗಳನ್ನು ಮನದಟ್ಟು ಮಾಡಲಾಯಿತು. ಈ ಎಲ್ಲ ಕಾರಣಗಳಿಂದ ಮೈಸೂರು ಕೊರೊನಾ ಮುಕ್ತವಾಯಿತು.

ಟೆಸ್ಟ್ಗೆ ಒಳಗಾದವರೆಷ್ಟು?
ಜುಬಿಲಂಟ್ನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದ ನಂತರ ಜಿಲ್ಲಾಡಳಿತ ಆರಂಭದಲ್ಲಿ 5,382 ಜನರ ಮೇಲೆ ನಿಗಾ ಇರಿಸಿತು. ಅದರಲ್ಲಿ 4,764 ಜನರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಒಟ್ಟಾರೆ 5,785 ಜನರಿಗೆ ಕೊರೊನಾ ಟೆಸ್ಟ್ ನಡೆಸಿದ್ದು, ಅದರಲ್ಲಿ 5,695 ಮಂದಿಗೆ ನೆಗೆಟಿವ್ ವರದಿ ಬಂದಿತ್ತು. ಉಳಿದ 90 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಇಂದಿನ ಶುಕ್ರವಾರಕ್ಕೆ 90 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುವ ಮೀಡಿಯಾ ಬುಲೆಟಿನ್ನಲ್ಲಿ ತಿಳಿಸಲಾಗಿದೆ.

ಮೈಸೂರು ಕೊರೊನಾ ಸೋಂಕಿತ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, 50 ದಿನಗಳಲ್ಲಿ ಕೊರೊನಾ ಮುಕ್ತ ಜಿಲ್ಲೆಯಾಗಿ ಮಾಡುವಲ್ಲಿ ಆರೋಗ್ಯ ಅಧಿಕಾರಿಗಳ, ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ ಸಿಬ್ಬಂದಿ, ವೈದ್ಯರು, ನರ್ಸ್ ಹಾಗೂ ಆಶಾ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಕೊರೊನಾ ಕುರಿತು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ.