ಮೈಸೂರು: ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಮ್ಮ ಪಕ್ಷದಲ್ಲಿ ನಡೆಯುತ್ತಿಲ್ಲ, ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ನಿರ್ವಹಣೆ ನಡೆಯುತ್ತಿದ್ದು ನಾಯಕತ್ವದ ಬದಲಾವಣೆ ಪ್ರಕ್ರಿಯೆ ಇಲ್ಲ ಎಂದು ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದರು.
ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ್ ಶ್ರೀಗಳ ಜೊತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ಮುಂದಿನ ಚುನಾವಣೆ ದೃಷ್ಟಿಯಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಆಗುತ್ತಿದೆ. ಇದು ನಿಜವೇ? ಎಂಬ ಪ್ರಶ್ನೆಗೆ ನಮ್ಮ ಪಕ್ಷದಲ್ಲಿ ಈ ರೀತಿಯ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ, ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಅನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಸಿಎಂ ಬದಲಾವಣೆ ಪ್ರಕ್ರಿಯೆ ನಡೆಯುತ್ತಿಲ್ಲ ಎಂದರು.
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷದ ಕೊನೆಯ ವೇಳೆಗೆ ನಮ್ಮ ದೇಶದಲ್ಲೇ ಲಸಿಕೆ ಉತ್ಪಾದನೆ ಆಗುವ ಸಾಧ್ಯತೆ ಇದ್ದು ಎಲ್ಲರಿಗೂ ಲಸಿಕೆ ಸಿಗುವಂತಹ ಕೆಲಸ ನಡೆಯುತ್ತಿದೆ. ಕೋವಿಡ್ ಮುಕ್ತವಾಗಲು ಎಲ್ಲರೂ ಲಸಿಕೆ ಪಡೆಯಬೇಕು ಎಂದರು.
ರಾಜ್ಯದಲ್ಲಿ ಸದ್ಯಕ್ಕೆ 100 ಬ್ಲ್ಯಾಕ್ ಫಂಗಸ್ ಸೋಂಕಿತರು ಇರುವ ಅಂದಾಜು ಇದ್ದು, ಇಲ್ಲಿಯವರೆಗೆ ಬ್ಲಾಕ್ ಫಂಗಸ್ ನಿಂದ ಯಾರು ಸಾವನ್ನಪ್ಪಿರುವ ಮಾಹಿತಿ ಇಲ್ಲ. ಈ ಬ್ಲಾಕ್ ಫಂಗಸ್ ಗೆ ಔಷಧವನ್ನು ಆಮದು ಮಾಡಿಕೊಳ್ಳಬೇಕಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮಲ್ಲೇ ಔಷಧ ಉತ್ಪಾದನೆ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಳೆದ ಕೆಲವು ದಿನಗಳಿಂದ ಶಕ್ತಿ ಮೀರಿ ಕೆಲಸ ಮಾಡುತ್ತಿದೆ ಎಂದ ಅವರು, ಕೆಲವು ಖಾಸಗಿ ಕಾಲೇಜುಗಳಲ್ಲಿ ಸರಿಯಾಗಿ ಶಿಕ್ಷಕರಿಗೆ ವೇತನ ನೀಡುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕಾಲೇಜುಗಳಲ್ಲಿ ಶುಲ್ಕ ಪಡೆಯುತ್ತಿದ್ದಾರೆ. ಸಂಬಳ ಕೊಡಲೇ ಬೇಕು. ಈ ಬಗ್ಗೆ ದೂರುಗಳು ಬಂದರೆ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಎಚ್ಚರಿಕೆ ನೀಡಿದರು.