ಮೈಸೂರು: ಜಿಲ್ಲೆಯ ನಂಜನಗೂಡು ಉಪವಿಭಾಗದ ಪೊಲೀಸ್ ಇಲಾಖೆಯಲ್ಲಿ ವಿನೂತನ ಪ್ರಯೋಗವೊಂದು ದೇಶದ ಗಮನ ಸೆಳೆದಿದೆ. ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯ ತೋರಿಸುತ್ತಿರುವ ಮಹಿಳೆಯರಿಗೆ ನಿನ್ನೆ (ಬುಧವಾರ) ರಾತ್ರಿ ಹೊಸ ಟಾಸ್ಕ್ ನೀಡಲಾಗಿತ್ತು. ಮಹಿಳಾ ಪೊಲೀಸರಷ್ಟೇ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಿ, ಪುರುಷ ಸಿಬ್ಬಂದಿಯಷ್ಟೇ ನಾವು ಗಟ್ಟಿಗರು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಮೈಸೂರು ಜಿಲ್ಲಾ ಪೊಲೀಸರಿಂದ ಈ ವಿನೂತನ ಪ್ರಯತ್ನ ನಡೆದಿದೆ. ಮಹಿಳಾ ಪೊಲೀಸರ ಕಾರ್ಯ ದಕ್ಷತೆ ಹೆಚ್ಚಿಸಲು ಜಿಲ್ಲಾ ಎಸ್ಪಿ ಚೇತನ್ ಈ ವಿನೂತನ ಪ್ರಯತ್ನ ಮಾಡಿದ್ದು, ಮಹಿಳಾ ಎಸ್ಐ ಹಾಗು ಮಹಿಳಾ ಸಿಬ್ಬಂದಿಯ ಗಸ್ತು ಕಾರ್ಯ ಯಶಸ್ವಿಯಾಗಿದೆ.
ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ನಂಜನಗೂಡು ಉಪವಿಭಾಗದಲ್ಲಿ ಬುಧವಾರ ಠಾಣೆಯಲ್ಲಿ, ರಸ್ತೆಯಲ್ಲಿ ಹಾಗು ಪ್ರತಿಯೊಂದು ವಿಭಾಗದಲ್ಲಿ ಮಹಿಳಾ ಪೊಲೀಸರನ್ನು ಮಾತ್ರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿತ್ತು. ಎಲ್ಲಾ ವಿಭಾಗಗಳಲ್ಲೂ ಮಹಿಳೆಯರು ಕಾರ್ಯ ನಿರ್ವಹಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಇಡೀ ರಾತ್ರಿ ಗಸ್ತು ತಿರುಗಿ, ವಾಹನಗಳ ಪರಿಶೀಲನೆ ಮಾಡಿದ ಮಹಿಳಾ ಪೊಲೀಸರ ಕಾರ್ಯಕ್ಕೆ, ನಂಜನಗೂಡಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಇದೊಂದು ವಿನೂತನ ಪ್ರಯೋಗ. ಇದು ಒಂದು ರಾತ್ರಿಗೆ ಮಾತ್ರ ಸೀಮಿತವಾದಂತೆ ಕೇವಲ ನಂಜನಗೂಡು ಉಪ ವಿಭಾಗದ ತಿ.ನರಸೀಪುರ, ನಂಜನಗೂಡು, ಬನ್ನೂರು, ಹುಲ್ಲಹಳ್ಳಿ ಭಾಗಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸಿಬ್ಬಂದಿ ಕಡಿಮೆ ಇದ್ದ ಕಡೆ ಮಹಿಳಾ ಗೃಹ ರಕ್ಷಕರನ್ನು ನಿಯೋಜಿಸಲಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ: ಅಹ್ಮದ್ ಪಟೇಲ್ ಮೊದಲ ಪುಣ್ಯತಿಥಿ.. ಸರ್ವಧರ್ಮ ಪ್ರಾರ್ಥನಾ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿ