ಮೈಸೂರು: ದೋಷಯುಕ್ತ ಹಾಗೂ ಅಪೂರ್ಣ ನಾಮಪತ್ರ ಸಲ್ಲಿಸಿರುವ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಸಿ.ಎಚ್. ವಿಜಯ್ ಶಂಕರ್ನಾಮಪತ್ರ ತಿರಸ್ಕರಿಸುವಂತೆ ಕೋರಿ, ನಾಳೆ ಹೈಕೋರ್ಟ್ನಲ್ಲಿ ಕೇಸ್ ದಾಖಲಿಸುವುದಾಗಿ ಬಿಜೆಪಿ ವಕ್ತಾರ ಗೋ ಮಧುಸೂದನ್ ಹೇಳಿದ್ದಾರೆ.
ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್. ವಿಜಯ್ ಶಂಕರ್ ಸಲ್ಲಿಸಿರುವ ನಾಲ್ಕು ಪ್ರತಿ ನಾಮಪತ್ರಗಳು ದೋಷಯುಕ್ತವಾಗಿದೆ. ಅಪೂರ್ಣ ನಾಮಪತ್ರ ಸಲ್ಲಿಸಿರುವುದರಿಂದ ಇವರ ನಾಮಪತ್ರವನ್ನು ತಿರಸ್ಕಾರ ಮಾಡಬೇಕೆಂದು ನಾಮಪತ್ರ ಪರಿಶೀಲನೆ ವೇಳೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಹೈ ಕೋರ್ಟ್ನಲ್ಲಿ ದೂರು ದಾಖಲಿಸುವುದಾಗಿ ಗೋ ಮಧುಸೂದನ್ ಹೇಳಿದರು.
ವಿಜಯ್ ಶಂಕರ್ ಮೈತ್ರಿ ಅಭ್ಯರ್ಥಿ ಆಗಿರುವುದರಿಂದ ಒಂದು ಕಡೆ ಮೋದಿ ಭಯ, ಮತ್ತೊಂದು ಕಡೆ ಜನತಾದಳದ ಭಯ. ಇದರಿಂದ ಸೋಲುವ ಭಯದಿಂದ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ವಿಜಯ್ ಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.