ಮೈಸೂರು: ಕೋವಿಡ್-19 ನಿಯಂತ್ರಣ ಸಂಬಂಧ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಉಲ್ಲಂಘನೆ ಮಾಡಿದ 7 ಮಂದಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಉದಯಗಿರಿ ಠಾಣಾ ವ್ಯಾಪ್ತಿಯ ಶಾಂತಿನಗರ ಮಹದೇವಪುರ ಮುಖ್ಯ ರಸ್ತೆ, ಹುಲಿಯಮ್ಮ ತೋಟದ ಪಕ್ಕದಲ್ಲಿರುವ ನ್ಯೂ ಸ್ಟಾರ್ ಟೀ ಕಾರ್ನರ್ ಅಂಗಡಿಯ ಮಾಲೀಕ ಮನ್ಸೂರ್ ಅಹಮ್ಮದ್, ಎಂ.ಜಿ ರಸ್ತೆಯ ಬಸಪ್ಪಾಜಿ ವೃತ್ತದ ಬಳಿ ಟೀ ಅಂಗಡಿಯ ಮಾಲೀಕ ರಂಗಸ್ವಾಮಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಶಿವರಾಂಪೇಟೆ ರಸ್ತೆಯಲ್ಲಿರುವ ಮಧುಷಾಹಿ ಸಮೋಸ ಮಾಲೀಕ ಸೂರಜ್ ಕುಮಾರ್, ಶಿವರಾಂಪೇಟೆಯ ವಿನೋಬಾ ರಸ್ತೆಯಲ್ಲಿರುವ ವಾಸವಾಂಭ ಸ್ಟೋರ್ಸ್‍ನ ಮಾಲೀಕ ಮಂಜುನಾಥ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ರಸ್ತೆಯಲ್ಲಿರುವ ಸಂತೋಷ್ ಜ್ಯೂವೆಲರ್ಸ್‍ನ ಕೆಲಸಗಾರನಾದ ಗೋವಿಂದ ಮತ್ತು ಮೂವರು ಗ್ರಾಹಕರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆ ಕೆಲಸಗಾರ ಮತ್ತು ಮೂವರು ಗ್ರಾಹಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಎಸ್ ರಸ್ತೆಯಲ್ಲಿರುವ ಅಮೃತ್ ಮಿಲ್ಕ್ ಬಾರ್ ಮಾಲೀಕ ರಮೇಶ್ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಗ್ರಾಹಕರಿಗೆ ಟೀ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಶೋಕಪುರಂ ಠಾಣೆ ವ್ಯಾಪ್ತಿಯ ಜಯನಗರದ ಮಂಜುನಾಥ ಬೇಕರಿಯ ಮಾಲೀಕ ಸತೀಶ್ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಗ್ರಾಹಕರಿಗೆ ಬೇಕರಿ ಪದಾರ್ಥಗಳನ್ನು ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆ ಇವರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.