ಮೈಸೂರು: ವಿಧಾನ ಪರಿಷತ್ ಚುನಾವಣೆ ಸೋಲಿಗೆ ನಾನೇ ಹೊಣೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ತಿಳಿಸಿದರು. ಮತ ಎಣಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸೋಲಿಗೆ ನಾನೇ ಜವಾಬ್ದಾರಿ ಎಂದು ಹೇಳಿದರು.
ಚುನಾವಣೆಗೋಸ್ಕರ ಬಿ.ಎಸ್.ಯಡಿಯೂರಪ್ಪ ಅವರು ಆಶೀರ್ವಾದ ಮಾಡಿದ್ದರು. ಮತ ಎಣಿಕೆಯ ಬಗ್ಗೆ ಪ್ರತಿ ಅರ್ಧ ಗಂಟೆಗೊಮ್ಮೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಪಕ್ಷದ ವರಿಷ್ಠರು ವಿಚಾರಿಸಿಕೊಳ್ಳುತ್ತಿದ್ದರು. ಹೋರಾಟ ಮಾಡಲು ಶಕ್ತಿಯನ್ನು ತುಂಬಿದರು. ಶಕ್ತಿ ಗುರಿ ತಲುಪಲು ಸಾಧ್ಯವಾಗಲಿಲ್ಲವಲ್ಲ ಎಂದು ನಾನೇ ಹೊಣೆ ಹೊತ್ತು ಪಕ್ಷದ ವರಿಷ್ಠರು, ರಾಜ್ಯಾದ್ಯಕ್ಷರು, ಮುಖ್ಯಮಂತ್ರಿಗಳು, ಯಡಿಯೂರಪ್ಪ, ಜಿಲ್ಲಾಮಂತ್ರಿ ಹಾಗೂ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತೇನೆ ಎಂದರು.
ಕಾನೂನಾತ್ಮಕವಾಗಿ ಪರಿಶೀಲಿಸಿ ಮುಂದಿನ ಹೋರಾಟ: ಎರಡನೇ ಪ್ರಾಶಸ್ತ್ಯದ ಮತದಲ್ಲಿ ನಮಗೆ ಕೊರತೆ ಉಂಟಾಯಿತು. 6 ಮತಗಳ ಅವಶ್ಯಕತೆ ಜೆಡಿಎಸ್ ಅಭ್ಯರ್ಥಿಗೆ ಬೇಕಾಗಿದ್ದು, ನಮಗೆ 56 ಮತಗಳ ಕೊರತೆ ಇದೆ. ನಾವು ಮರು ಎಣಿಕೆಗೆ ಮನವಿ ಮಾಡಿದೆವು. ಆದರೆ, ಚುನಾವಣಾ ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಪ್ರಶ್ನಿಸಿಸುವ ಕುರಿತು ಪಕ್ಷದ ವರಿಷ್ಠರಲ್ಲಿ ಚರ್ಚೆ ಮಾಡುತ್ತೇವೆ. ಇನ್ನು ಚುನಾವಣಾ ಫಲಿತಾಂಶ ಘೋಷಣೆ ಮಾಡಿಲ್ಲ. ಫಲಿತಾಂಶ ಸ್ವಾಗತಿಸುವ ಮುಂಚೆ ಕಾನೂನಾತ್ಮಕವಾಗಿ ಆಗಿರುವ ಲೋಪದೋಷಗಳು ಮತ್ತು ಎಣಿಕೆಯಲ್ಲಿ ನಮ್ಮ ಮನವಿ ಪರಿಗಣಿಸಬಹುದಗಿತ್ತು. ಏಕೆಂದರೆ ಕೂದಲೆಳೆ ಅಂತರದಲ್ಲಿದ್ದು, ಎರಡನೇ ಅಭ್ಯರ್ಥಿಗೆ ಬೇಕಾದ ಮತಗಳು ಲಭ್ಯವಿಲ್ಲ. ಅವರ ಪ್ರಕ್ರಿಯೆ ಏನೇ ಇದ್ದರು ಮನವಿ ಆಲಿಸಬೇಕಾಗಿತ್ತು. ಈ ದಿಕ್ಕಿನಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ.
ಇದನ್ನೂ ಓದಿರಿ: ಮಧ್ಯಾಹ್ನದ ಬಿಸಿಯೂಟದಲ್ಲಿ ಶೇಂಗಾ ಚಿಕ್ಕಿ ನೀಡಲು ಶಿಕ್ಷಣ ಇಲಾಖೆ ಚಿಂತನೆ
ವರಿಷ್ಠರ ಗಮನಕ್ಕೆ ತಂದು ಮುಂದುವರೆಯುತ್ತೇವೆ ಎಂದು ಹೇಳಿದರು. ಒಬ್ಬ ಕಾರ್ಯಕರ್ತನ ಮೇಲೆ ಭರವಸೆ ಇಟ್ಟು, ಸಾಮಾಜಿಕ ನ್ಯಾಯ ನೀಡುವ ಬದ್ದತೆ ಮೇಲೆ ಪಕ್ಷದ ವರಿಷ್ಠರು ಬಹಳ ಶ್ರಮ ಪಟ್ಟು, ಗೆಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದರು. ಬಹಳ ಆಶಾದಾಯಕ, ನಿರೀಕ್ಷೆ ಇತ್ತು. ಆ ನಿರೀಕ್ಷೆ ತಲುಪಲು ಆಗದಿರುವುದಕ್ಕೆ ವರಿಷ್ಠರಲ್ಲಿ , ಬಿ.ಎಸ್ ಯಡಿಯೂರಪ್ಪ ಹಾಗೂ ಕಾರ್ಯಕರ್ತರು, ಮುಖಂಡರಲ್ಲಿ ಕ್ಷಮೆ ಕೇಳುತ್ತೇನೆ. ಇಂತಹ ಒಂದು ಅವಕಾಶ ಬಳಕೆಯಾಗಲಿಲ್ಲವೆಂಬ ನೋವಿನಲ್ಲಿ ತೆರಳುತ್ತಿದ್ದೇನೆ ಎಂದರು.
ಮೊದಲ ಪ್ರಾಶಸ್ತ್ಯದ ಮತ ಹಾಗೂ ಎರಡನೇ ಪ್ರಾಶಸ್ತ್ಯದ ಮತ ನಮ್ಮ ಲೆಕ್ಕದ ಪ್ರಕಾರ ಆಗಿಲ್ಲ. ಕಾರಣ ನನಗೂ ಅರ್ಥ ಆಗುತ್ತಿಲ್ಲ. ಎಲ್ಲಾ ಗ್ರಾಮ ಪಂಚಾಯತಿ, ಸದಸ್ಯರನ್ನು ಭೇಟಿ ಮಾಡಿದ್ದೆ. ಒಂದು ವರ್ಷದಿಂದ ಸತತವಾಗಿ ಪರೀಕ್ಷೆಯಲ್ಲಿದ್ದೆ. ಇತರ ಪಕ್ಷದ ಅಭ್ಯರ್ಥಿಗಳನ್ನು ಕೊನೆಯ ಹಂತದಲ್ಲಿ ಘೋಷಣೆ ಮಾಡಿದ್ದು, ಮತದಾರರನ್ನು ತಲುಪಲು ಆಗಿಲ್ಲ. ಆದರೂ ಮತದಾರರು ಯಾಕೆ ನನ್ನನ್ನು ಆಯ್ಕೆ ಮಾಡಿಲ್ಲ ಎಂಬ ನೋವು ನನಗೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ಸಂಘಟಕರ ಸೋಗಿನಲ್ಲಿ ಮನೆಗೆ ಎಂಟ್ರಿ, ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಬೆದರಿಸಿ ನಗದು, ಚಿನ್ನ ದರೋಡೆ
ಇಡೀ ಪಕ್ಷ ವ್ಯವಸ್ಥಿತವಾಗಿ, ಸಂಘಟನಾತ್ಮಕವಾಗಿ ಬಹಳ ಹೋರಾಟ ಮಾಡಿದೆ. ನಮ್ಮ ಪಕ್ಷದಲ್ಲಿ ಯಾವುದೇ ಲೋಪ ಇಲ್ಲ. ಚೆನ್ನಾಗಿ ಕೆಲಸ ಮಾಡಿದ್ದಾರೆ. ಚುನಾವಣಾ ಫಲಿತಾಂಶ ಬಂದಾಗ ಸ್ವೀಕಾರ ಮಾಡಬೇಕಾಗುತ್ತದೆ. ತಾಂತ್ರಿಕವಾಗಿ ಲೋಪದೋಷಗಳಿದ್ದರೆ ಕಾನೂನಾತ್ಮಕವಾಗಿ ನೋಡಿಕೊಳ್ಳುತ್ತೇವೆ. ಜಾತಿ ಮತ್ತು ಹಣದ ಪ್ರಾಬಲ್ಯ ಎಂದು ಹೇಳಲು ಸಾಧ್ಯವಿಲ್ಲ. ನನ್ನಂತವನು ಗೆದ್ದಿದ್ದರೆ ಪ್ರಜಾಪ್ರಭುತ್ವದ ಸುಂದರತೆ ವಿಧಾನ ಸೌಧದಲ್ಲಿ ಪ್ರಜ್ವಲಿಸುತ್ತಿತ್ತು. ನನ್ನ ಯೋಚನೆ, ವಿಚಾರ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವನು, ಪತ್ರಕರ್ತನಾಗಿ ಬಂದವನು. ಹೋರಾಟದಿಂದ ಬಂದವನು. ಸಾಮಾಜಿಕ ಚಳವಳಿಯಲ್ಲಿ ತೊಡಗಿಸಿಕೊಂಡವನು. ಮೈಸೂರಿನ ಬಗ್ಗೆ , ಗ್ರಾಮೀಣಾಭಿವೃದ್ಧಿ ಬಗ್ಗೆ ಅತ್ಯಂತ ಕಾಳಜಿ ಇಟ್ಟುಕೊಂಡವನು. ಹತ್ತು ಹಲವು ಕನಸುಗಳನ್ನು ಕಟ್ಟಿಕೊಂಡಿದ್ದೆ. ಹಂಬಲದ ತುಡಿತ ಇತ್ತು ಅದೆಲ್ಲವೂ ಪ್ರತಿಬಿಂಬಿಸಿ ಮಾದರಿ ಜನಪ್ರತಿನಿಧಿಯಾಗಬೇಕೆಂಬ ಹೋರಾಟ, ಹಂಬಲ ಇತ್ತು. ಅದಕ್ಕೆ ಅವಕಾಶ ಆಗಿಲ್ಲ ಎಂಬ ನೋವು ಕೊನೆಯುಸಿರು ಇರುವವರೆಗೆ ಉಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.