ಮೈಸೂರು : ಶಾಸ್ತ್ರೀಯ ಕನ್ನಡ ಸ್ವಾಯತ್ತ ಕೇಂದ್ರವನ್ನು ಸ್ಥಾಪನೆ ಮಾಡಲು ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ್ ಪ್ಯಾಲೇಸ್ ಅನ್ನು ಗುರುತಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದರು. ಶಾಸ್ತ್ರೀಯ ಕನ್ನಡ ಸ್ವಾಯತ್ತ ಕೇಂದ್ರವನ್ನು ಸ್ಥಾಪನೆ ಮಾಡಲು ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ್ ಪ್ಯಾಲೇಸ್ ಅನ್ನು ಈ ಕೇಂದ್ರವಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸಂಸದರು ಹಾಗೂ ಭಾರತೀಯ ಭಾಷಾ ಸಂಸ್ಥೆಯ ನಿರ್ದೇಶಕರು, ಅಧಿಕಾರಿಗಳು ಹಾಗೂ ಶಾಸಕ ನಾಗೇಂದ್ರ ಅವರು ಪ್ಯಾಲೇಸ್ ಅನ್ನು ವೀಕ್ಷಿಸಿ ಸಭೆ ನಡೆಸಿದರು. 2015ರಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡಕ್ಕೆ ವಿಶೇಷ ಸ್ಥಾನಮಾನ ಕೊಡಲಾಗಿದೆ. ಕಳೆದ 7 ವರ್ಷಗಳಿಂದ ಇದಕ್ಕೆ ಸರಿಯಾದ ಸ್ವಂತ ಕಟ್ಟಡ ಹಾಗೂ ಸೌಲಭ್ಯಗಳು ಇರಲಿಲ್ಲ. ಇದನ್ನು ಮನಗಂಡ ಹಿಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸಿ.ಟಿ.ರವಿ ಅವರು ಮೈಸೂರು ವಿವಿಯಲ್ಲಿ ಈ ಕೇಂದ್ರವನ್ನ ಸ್ಥಾಪಿಸಲು ನಿರ್ಧರಿಸಿದ್ದರು.
ಇದನ್ನೂ ಓದಿ: ಶಾಲೆಗಳಿಗೆ ಬಾಂಬ್ ಬೆದರಿಕೆ.. ಇ-ಮೇಲ್ ಪೋರ್ಟಲ್ ವಿದೇಶದಲ್ಲಿರುವ ಕಾರಣ ಮಾಹಿತಿ ವಿಳಂಬ : ಪೊಲೀಸ್ ಆಯುಕ್ತ ಪಂತ್
ಈ ಕೇಂದ್ರ ಸ್ಥಾಪನೆಯಾಗದೇ ಹಾಗೆ ಉಳಿದಿತ್ತು. ಆದರೆ, ಈಗ ಮೈಸೂರು ವಿವಿ ಕ್ಯಾಂಪಸ್ನಲ್ಲಿರುವ ಪಾರಂಪರಿಕ ಜಯಲಕ್ಷ್ಮಿ ವಿಲಾಸ್ ಪ್ಯಾಲೇಸ್ ಅನ್ನು ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಿ, ಶಾಸ್ತ್ರೀಯ ಕನ್ನಡ ಸ್ವಯತ್ತ ಕೇಂದ್ರ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 13ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಭೇಟಿ ನೀಡಿ, ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಮ್ಮದು ಅಣ್ಣ-ತಮ್ಮಂದಿರ ಜಗಳ : ಶಾಸಕ ನಾಗೇಂದ್ರ ಹಾಗೂ ನನ್ನ ನಡುವಿನ ಜಗಳ ಅಣ್ಣ-ತಮ್ಮಂದಿರ ಜಗಳವಿದ್ದಂತೆ. ನಾವು ಒಂದೇ ಪಕ್ಷದವರು. ಸಣ್ಣಪುಟ್ಟ ಜಗಳ ಸರಿಯಾಗಿದೆ. ಶಾಸಕ ನಾಗೇಂದ್ರ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಗ್ಯಾಸ್ ಪೈಪ್ ಲೈನ್ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಶೀಘ್ರವೇ ಕೆಲಸ ಪೂರ್ಣಗೊಂಡು ಜನರ ಸೇವೆಗೆ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.